ಈ ಅಪರೂಪದ 2 ತಲೆ ಹಾವಿಗಿದೆ ಎರಡು ಹೆಸರು! ಒಂದಕ್ಕೆ ಹೆಚ್ಚು ಆಹಾರ ಕೊಟ್ರೆ ಇನ್ನೊಂದಕ್ಕೆ ಕೋಪ

Two Head Snake
Published on

ನವದೆಹಲಿ: ಅಪರೂಪದ ಎರಡು ತಲೆಯ ಹಾವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಮೆರಿಕ ರಾಜ್ಯ ಮಿಸ್ಸೋರಿಯ ಕನ್ಸಾಸ್ ನಗರದಲ್ಲಿರುವ ಪ್ರಕೃತಿ ಕೇಂದ್ರದಲ್ಲಿ ಈ ಅಪರೂಪದ ಹಾವನ್ನು ಸಂರಕ್ಷಿಸಲಾಗಿದೆ.

ಇದೊಂದು ಹೆಣ್ಣು ಕೇರೆಹಾವು ಆಗಿದ್ದು, ಅಪಾಯಕಾರಿಯಲ್ಲ. ಈ ಹಾವಿಗೆ ಟೈಗರ್​ ಮತ್ತ ಲಿಲ್ಲಿ ಎಂದು ಹೆಸರಿಡಲಾಗಿದೆ. ಹೊಳೆಯುವ ಕಪ್ಪು ಚರ್ಮದೊಂದಿಗೆ ನೋಡಲು ತುಂಬಾ ಸುಂದರವಾಗಿದೆ. ಟೈಗರ್-ಲಿಲ್ಲಿಯನ್ನು ನೈಋತ್ಯ ಮಿಸ್ಸೋರಿಯಲ್ಲಿ 2017 ರಲ್ಲಿ ಪತ್ತೆಹಚ್ಚಲಾಯಿತು. ಅಂದಿನಿಂದ ಈ ಹಾವು ಮಿಸ್ಸೋರಿ ಸಂರಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ.

ಟೈಗರ್-ಲಿಲ್ಲಿಗೆ ಇದೀಗ ಏಳು ವರ್ಷ. ಮೂರು ಅಡಿ ಎತ್ತರವಿದೆ. ಈ ಹಾವು ಸುಮಾರು 30 ವರ್ಷಗಳವರೆಗೆ ಬದುಕುತ್ತದೆ ಮತ್ತು ಐದು ಅಡಿಯಷ್ಟು ಉದ್ದ ಬೆಳೆಯುತ್ತದೆ. ಎರಡೂ ತಲೆಗಳು ದೇಹದ ಮೇಲೆ ನಿಯಂತ್ರಣವನ್ನು ಹೊಂದಿವೆ. ಆದಾಗ್ಯೂ, ಒಂದು ತಲೆ ಇನ್ನೊಂದಕ್ಕಿಂತ ದೊಡ್ಡದಾಗಿರುತ್ತದೆ.

ಎಡಭಾಗದಲ್ಲಿರುವ ತಲೆ ಲಿಲ್ಲಿ ಮತ್ತು ಬಲಭಾಗದಲ್ಲಿರುವ ತಲೆಗೆ ಟೈಗರ್​ ಎಂದು ಹೆಸರಿಸಲಾಗಿದೆ. ಎರಡೂ ತಲೆಗಳು ಒಂದೇ ಜೀರ್ಣಾಂಗ ವ್ಯವಸ್ಥೆಯನ್ನು ಹಂಚಿಕೊಂಡಿದ್ದರೂ ಎರಡಕ್ಕೂ ಪ್ರತ್ಯೇಕವಾಗಿ ಆಹಾರವನ್ನು ನೀಡಬೇಕಾಗುತ್ತದೆ. ಒಂದಕ್ಕೆ ಅತಿಯಾಗಿ ತಿನ್ನಿಸಿದರೆ, ಮತ್ತೊಂದು ತಲೆ ಕೆಡಿಸಿಕೊಳ್ಳುತ್ತದೆ. ಆದ್ದರಿಂದ ಕೆಲವು ಸಂದರ್ಭಗಳಲ್ಲಿ, ಒಬ್ಬರಿಗೆ ಆಹಾರವನ್ನು ನೀಡುವಾಗ, ಇನ್ನೊಂದು ತಲೆಯನ್ನು ಸಣ್ಣ ಕ್ಯಾಪ್​ನಿಂದ ಮುಚ್ಚಲಾಗುತ್ತದೆ.

ಲಿಲ್ಲಿ, ಟೈಗರ್​​ಗಿಂತ ಹೆಚ್ಚು ಆಹಾರವನ್ನು ತಿನ್ನುತ್ತದೆ ಎಂದು ಹಾವಿನ ಪಾಲಕರು ಹೇಳುತ್ತಾರೆ. ಸದ್ಯ ಈ ಅಪರೂಪದ ಹಾವಿಗೆ ನಿತ್ಯವೂ ಆರೈಕೆ ಮಾಡಲಾಗುತ್ತಿದ್ದು, ಇದನ್ನು ನೋಡಲು ನೂರಾರು ಜನರು ಪ್ರತಿನಿತ್ಯ ಬರುತ್ತಲೇ ಇರುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net