Marriage : ತಾಳಿ ಕಟ್ಟುವ ಶುಭವೇಳೆಗೆ ಕೈಯಲ್ಲಿ ಹೂವಿನ ಮಾಲೆ ಹಿಡಿದು ಒಬ್ಬರನೊಬ್ಬರು ಕಣ್ಣಿನಲ್ಲೇ ಖುಷಿ ಹಂಚಿಕೊಳ್ಳುವ ನವದಂಪತಿ, ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುವ ತಮಗೆ ಬಂಧು-ಮಿತ್ರರು, ಸಂಬಂಧಿಕರ ಶುಭಹಾರೈಕೆ, ಆರ್ಶಿವಾದಕ್ಕಾಗಿ ಎದುರುನೋಡುತ್ತಿರುತ್ತಾರೆ. ನವಜೋಡಿಗಳನ್ನು ಕಣ್ತುಂಬಿಕೊಳ್ಳಲು ಕುಟುಂಬ ಸಮೇತ ಆಗಮಿಸುವವರಿಗೆ ಮದುವೆ ಅರ್ಧಕ್ಕೆ ನಿಂತು ಹೋದರೆ, ದೊಡ್ಡ ಆಘಾತವೇ ಉಂಟಾಗುತ್ತದೆ. ಇದೇ ರೀತಿ ಇಲ್ಲಿಯೂ ಕೂಡ ನಡೆದಿದ್ದು, ಇನ್ನೇನು ತಾಳಿಕಟ್ಟಬೇಕು ಅಷ್ಟರೊಳಗೆ ವಧುವಿಗೆ ಬಂದ ಆ ಒಂದೇ ಒಂದು ದೂರವಾಣಿ ಕರೆ, ವಿವಾಹವನ್ನೇ ಮುರಿದುಹಾಕಿದೆ.

ಈ ಘಟನೆ ಹಾಸನದ ಶ್ರೀ ಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಆಲೂರು ತಾಲೂಕಿನ ಯುವಕ ವೇಣುಗೋಪಾಲ್ ಮತ್ತು ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಪಲ್ಲವಿ ಮದುವೆ ನಿಶ್ಚಯವಾಗಿತ್ತು. ವೇಣುಗೋಪಾಲ್ ಶಿಕ್ಷಕನಾಗಿದ್ದು, ಪಲ್ಲವಿ ಸ್ನಾತಕೋತ್ತರ ಪದವೀಧರೆ. ಇಂದು ಇಬ್ಬರ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿತ್ತು.
ಮದುವೆಗೆ ಬಂದಿದ್ದ ನೆಂಟರು, ಸ್ನೇಹಿತರು ಹಾಗೂ ಆಪ್ತರು ಹೊಸ ಉಡುಪುಗಳನ್ನು ಧರಿಸಿ, ಲವಲವಿಕೆಯಿಂದ ಓಡಾಡಿಕೊಂಡಿದ್ದರು. ಮಂಟಪದಲ್ಲಿ ಪೂಜಾ ವಿಧಾನಗಳು ಜರುತ್ತಿದ್ದವು. ಅಲ್ಲದೆ, ಬಗೆಬಗೆಯ ತಿನಿಸುಗಳು ಕೂಡ ತಯಾರಾಗುತ್ತಿದ್ದವು. ಒಟ್ಟಾರೆ ಇಡೀ ಕಲ್ಯಾಣ ಮಂಟಪ ನಗುವಿನ ಅಲೆಯಲ್ಲಿ ತೇಲಾಡುತ್ತಿರುವಾಗ ಇದ್ದಕ್ಕಿದ್ದಂತೆ ಸೈಲೆಂಟ್ ಆಯಿತು. ಅದಕ್ಕೆ ಕಾರಣ ವಧುವಿಗೆ ಬಂದ ಒಂದು ಫೋನ್ ಕಾಲ್.
ಇನ್ನೇನು ವರ ತಾಳಿ ಕಟ್ಟಬೇಕು ಅಷ್ಟರಲ್ಲಿ, ವಧುವಿಗೆ ಬಂದ ಫೋನ್ ಕಾಲ್ನಿಂದ ಮದುವೆ ರದ್ದಾಗಿದೆ. ಫೋನ್ ಕಾಲ್ ಸ್ವೀಕರಿಸಿದ ವಧುವಿಗೆ ಅದೇನು ಸಂದೇಶ ಬಂತೋ ಕೂಡಲೇ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿ, ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ಅನಿರೀಕ್ಷಿತ ಘಟನೆಯನ್ನು ನೋಡಿ, ಮಂಟಪದಲ್ಲಿದ್ದವರೆಲ್ಲ ಒಂದು ಕ್ಷಣ ಮೌನವಾದರು. ಏನು ನಡೆಯುತ್ತಿದೆ ಅನ್ನೋ ಕಲ್ಪನೆ ಅವರಿಗೆ ಇರಲಿಲ್ಲ.
ಅಷ್ಟಕ್ಕೂ ಏನಾಯಿತು ಅಂದರೆ, ವಧುವಿಗೆ ಫೋನ್ ಕಾಲ್ ಮಾಡಿದ್ದು ಬೇರೆ ಯಾರೂ ಅಲ್ಲ, ಆಕೆಯ ಪ್ರಿಯಕರ. ಆತ ಅದೇನ್ ಹೇಳಿದ್ನೋ ಆಕೆ ಮದುವೆ ಬೇಡ ಅಂತ ಹೊರಟು ಹೋದಳು. ಈ ವೇಳೆ ಆಕೆಯ ಪಾಲಕರು ಆಕೆಯನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ವಧುವಿನ ನಡೆಯನ್ನು ಮನಗಂಡ ವರನ ಕಡೆಯವರು ತಮಗೂ ಈ ಮದುವೆ ಬೇಡ ಅಂತ ಅಲ್ಲಿಂದ ಹೊರಟು ಹೋದರು.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು. ಸದ್ಯ ಈ ಒಂದು ಬೆಳವಣಿಗೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.