ಬಲವಂತವಾಗಿ ಎಣ್ಣೆ ಕುಡಿಸಿ, ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ಮಾಡಿದ್ರೂ ದೂರು ಕೊಡಬಾರದಾ? ಕಣ್ಣೀರಿಟ್ಟ ಸಂತ್ರಸ್ತೆ! Madenur Manu

Madenur Manu
Published on

Madenur Manu : ತಮ್ಮ ಅಭಿನಯದ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಗೂ ಮುನ್ನವೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಮನು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಸಹನಟಿ ಗಂಭೀರ ಆರೋಪ ಮಾಡಿದ್ದು, ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇದರ ನಡುವೆ ಸಂತ್ರಸ್ತೆ ಫೇಸ್​ಬುಕ್​ ಲೈವ್​ ಬಂದು ಕಣ್ಣೀರಿಟ್ಟಿದ್ದಾರೆ.

ಸಿನಿಮಾ ಬಿಡುಗಡೆ ಹೊತ್ತಲ್ಲಿ ಮಡೆನೂರು ಮನು ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಕ್ಕೆ ಸಂತ್ರಸ್ತೆಯ ವಿರುದ್ಧವೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಈ ಘಟನೆ ನಡೆದಿದ್ದು, 2022ರಲ್ಲಿ ಅಂತ ದೂರಿನಲ್ಲಿ ಉಲ್ಲೇಖವಾಗಿದೆ. ಆದರೆ, ಈಗ ದೂರು ದಾಖಲಿಸಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮನನೊಂದಿರುವ ಸಂತ್ರಸ್ತೆ ಫೇಸ್​ಬುಕ್​ ಲೈವ್​ ಬಂದು ಕಣ್ಣೀರಿಟ್ಟಿದ್ದಾರೆ.

2022ರಲ್ಲಿ ಅತ್ಯಾಚಾರ ಆಗಿದೆ ಅಂತ ಹೇಳಿ ಈಗ ಕಂಪ್ಲೇಂಟ್​ ಕೊಟ್ಟಿದ್ದಾಳೆ. ಇಷ್ಟು ದಿನ ಆಕೆ ಎಲ್ಲಿ ಹೋಗಿದ್ದಳು? ಸಿನಿಮಾ ರಿಲೀಸ್​ ಟೈಂನಲ್ಲಿ ಏಕೆ ದೂರು ನೀಡುತ್ತಿದ್ದಾಳೆ ಎಂದು ತುಂಬಾ ಮಂದಿ ನೆಗೆಟಿವ್​ ಕಾಮೆಂಟ್​ ಹಾಕ್ತಿದ್ದೀರಾ, ಘಟನೆ ನಡೆದಿದ್ದನ್ನು ಒಂದು ಕಡೆ ಇಡೋಣ. ಈಗ ಕಂಪ್ಲೇಂಟ್​ ಕೊಟ್ಟಿದ್ದೇಕೆ ಎಂಬುದರ ಬಗ್ಗೆ ಮಾತನಾಡುತ್ತೇನೆ.

ನಾನು ಇಷ್ಟು ದಿನ ಆಸ್ಪತ್ರೆಯಲ್ಲಿ ಇದ್ದೆ. ಎರಡು ದಿನಗಳ ಹಿಂದಷ್ಟೇ ಗುಣವಾಗಿ ವಾಪಸ್​ ಬಂದಿದ್ದೇನೆ. ಕಳೆದ ಶನಿವಾರ ಬೆಳಗಿನ ಜಾವ 12.30ಕ್ಕೆ ನನ್ನ ಮನೆಗೆ ಬಂದ ಮನು, ಬಲವಂತವಾಗಿ ನನ್ನ ಮೂಗು ಮುಚ್ಚಿ, ಎಣ್ಣೆ ಕುಡಿಸಿದ್ದಲ್ಲದೆ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಖಾಸಗಿ ವಿಡಿಯೋ ಮಾಡಿಕೊಂಡಿದ್ದಾನೆ. ಇಂಥಾ ವಿಕೃತಿ ಮೆರೆದರೂ ಕೂಡ ದೂರು ಕೊಡಬಾರದಿತ್ತಾ? ಎಂದು ಸಂತ್ರಸ್ತೆ ಕಣ್ಣೀರಾಕಿದ್ದಾರೆ.

ನಾನು ತುಂಬಾ ದಿನಗಳಿಂದಲೇ ಕಾನೂನು ಪ್ರಕ್ರಿಯೆ ನಡೆಸಿಕೊಂಡು ಬರುತ್ತಿದ್ದೇನೆ. ಎಲ್ಲ ಪ್ರಕ್ರಿಯೆ ಮುಗಿಸಿ, ಎಫ್​ಐಆರ್​ ಆದ ಬೆನ್ನಲ್ಲೇ ಇದು ಸುದ್ದಿಯಾಗಿದೆ. ಆ ಬಳಿಕ ನಿಮಗೆಲ್ಲರಿಗೂ ಇದು ಗೊತ್ತಾಗಿದೆ. ದೂರು ನೀಡುವ ಮುನ್ನವೇ ನಾನು ಮನುಗೆ ಫೋನ್​ ಮಾಡಿದ ಹೇಳಿದ್ದೆ. ಸಿನಿಮಾ ಅಂತಾ ದೂರು​ ಕೊಟ್ಟಿಲ್ಲ. ಲೈಂಗಿಕ ದೌರ್ಜನ್ಯ ವಿಡಿಯೋ ಮಾಡಿಕೊಂಡರು ದೂರು ನೀಡಬಾರದಾ? ಏನಾದರೂ ಆಗಿ ಸತ್ತರೇ ಮಾತ್ರ ನೀವು ಜಸ್ಟೀಸ್​ ಫಾರ್​ ಸೋಕಾಲ್ಡ್​ ಅಂತಾ ನ್ಯಾಯಕ್ಕಾಗಿ ಆಗ್ರಹಿಸುತ್ತೀರಾ? ಬದುಕಿರುವಾಗಲೇ ನ್ಯಾಯಕ್ಕಾಗಿ ಆಗ್ರಹಿಸಿದರೆ ಈ ರೀತಿ ಕೆಟ್ಟ ಕಾಮೆಂಟ್​ಗಳನ್ನು ಮಾಡುತ್ತೀರಾ ಎಂದು ಸಂತ್ರಸ್ತೆ ಕಣ್ಣೀರು ಹಾಕಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net