

ಬೆಂಗಳೂರು: ರಾತ್ರಿ 9 ಗಂಟೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು. ಬಳಿಕ ತಮ್ಮ ಮನೆಗಳಿಗೆ ತೆರಳಬೇಕು. ಯಾರು ಕೂಡ ಅನಾವಶ್ಯಕವಾಗಿ ಓಡಾಟ ನಡೆಸುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ಇಂದಿನಿಂದ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಂತ್, ಯಾರಾದರೂ ಅನಗತ್ಯವಾಗಿ ಓಡಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ಯಾರೊಬ್ಬರೂ ಬೇಕಾಬಿಟ್ಟಿಯಾಗಿ ಓಡಾಡಬಾರದು. ನಮ್ಮ ಪೊಲೀಸರು ಬಂದೋಬಸ್ತ್‌ಗೆ ಸಿದ್ಧರಾಗಿದ್ದಾರೆ. ನಗರದ ಎಲ್ಲ ಫ್ಲೈ ಓವರ್‌ಗಳನ್ನ ಮುಚ್ಚಾಲಾಗುತ್ತದೆ ಎಂದರು. ಇದನ್ನೂ ಓದಿರಿ ದೇವರ ಪೂಜೆ ಮಾಡಿದ್ರೆ ಕರೊನಾ ನಿಯಂತ್ರಣಕ್ಕೆ ಬರುತ್ತಾ? ಕಥೆ ಹೇಳಿದ ರೋಹಿಣಿ ಸಿಂಧೂರಿ
ತುರ್ತು ಸೇವೆ, ಹಾಲು, ಪೇಪರ್ ವಾಹನಗಳಿಗೆ ಯಾವುದೇ ಸಮಸ್ಯೆಯಿಲ್ಲ. ಎಂದಿನಂತೆ ಸಂಚರಿಸಲು ಅನುಮತಿ ನೀಡಲಾಗಿದೆ. ಯಾವುದೇ ರೀತಿಯ ಪಾಸ್ಗಳನ್ನ ವಿತರಣೆ ಮಾಡುತ್ತಿಲ್ಲ ಎಂದು ಕಮಲ್ ಪಂತ್ ವಿವರಿಸಿದರು.
ಬೆಂಗಳೂರಿನ ಫ್ಲೈಓವರ್ಗಳನ್ನು ರಾತ್ರಿ 9:50ಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿ ಬಂದ್ ಮಾಡಲಿದ್ದಾರೆ. ರಿಯಾಯಿತಿ ಇರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ. ದ್ವಿಮುಖ ರಸ್ತೆಯಲ್ಲಿ ಒಂದು ಮಾರ್ಗವನ್ನ ಬಂದ್ ಮಾಡಲಾಗುವುದು. ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತೆ. ವಿಡಿಯೋ ವಾಲ್ ಕೆಲಸ ಮಾಡುತ್ತಿರುತ್ತೆ ಎಂದರು.
ಪೊಲೀಸರ ಕಣ್ತಪ್ಪಿಸಿ ರಾತ್ರಿ ವಾಹನ ಸಂಚಾರ ಮಾಡುವರ ಮೇಲೆ ಕಣ್ಣಿಡಲಾಗುತ್ತದೆ. ನಿಯಮ ಉಲ್ಲಂಘಿಸಿದರೆ ಸಿಸಿ ಕ್ಯಾಮರಾ ಪರಿಶೀಲಿಸಿ ಅಂತಹ ವಾಹನಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದರು.