

ನ್ಯೂಯಾರ್ಕ್: ಮೊದಲ ನೋಟದಲ್ಲೇ ಪ್ರೀತಿಸಿದ ಹುಡಗಿಯ ಮನಸ್ಸನ್ನು ಗೆಲ್ಲಲು ಯುವಕನೊಬ್ಬ ಪೂರ್ತಿ ರೆಸ್ಟೋರೆಂಟ್ನ್ನೇ ಬುಕ್ ಮಾಡಿದ್ದ. ತನ್ನ ಹೆಸರನ್ನಷ್ಟೇ ಹೇಳಿ ಪರಿಚಯ ಮಾಡಿಕೊಂಡಿದ್ದ ಆತ ತಾನು ಯಾರು? ಎಲ್ಲಿಯವನು? ಏನು ಮಾಡೋದು ಎನ್ನುವುದರ ಬಗ್ಗೆ ಸುಳಿವೇ ಬಿಟ್ಟುಕೊಟ್ಟಿರಲಿಲ್ಲ. ಅವನ ಬಗ್ಗೆ ನಿಜವಾದ ಕಥೆ ತಿಳಿದ ಮೇಲೆ ಪ್ರೀತಿಸಿದ ಹುಡುಗಿ ಕಂಗಾಲಾಗಿದ್ದಾಳೆ.
ಈ ರೀತಿಯ ಕಥೆ ನಡೆದಿದ್ದು ನೈಜೀರಿಯಾದ ರಾಜವಂಶದ ಕುಡಿ, ರಾಜಕುಮಾರ ಅಡೆಕುನ್ಲೆ ಅಡೆಬಾಯೊ ಒಮಿಲಾನಾ ಬದುಕಲ್ಲಿ. ಈತನನ್ನು ಎಲ್ಲರೂ ಕುನ್ಲಿ ಎಂದೇ ಕರೆಯುತ್ತಾರಂತೆ. ಈ ಕುನ್ಲಿ 16 ವರ್ಷಗಳ ಹಿಂದೆ ನೈಜೀರಿಯಾದಿಂದ ನ್ಯೂಯಾರ್ಕ್ಗೆ ವ್ಯವಹಾರದ ನಿಮಿತ್ತ ಬಂದಿದ್ದರಂತೆ. ಆ ವೇಳೆ ಕೀಶಾ ಹೆಸರಿನ ಮಾಡೆಲ್ ಯಾವುದೋ ಅವಕಾಶ ಹುಡುಕಿಕೊಂಡು ನಿಂತಿದ್ದರು. ಕೀಶಾರನ್ನು ನೋಡುತ್ತಿದ್ದಂತೆ ಕುನ್ಲಿಗೆ ಪ್ರೇಮವಾಗಿದೆ. ನೇರವಾಗಿ ಹೋಗಿ ಮೊಬೈಲ್ ನಂಬರ್ ಕೇಳಿದ್ದಾರೆ. ಆಕೆ ನಂಬರ್ ಕೊಟ್ಟ ಮೇಲೆ ಅವಳೊಂದಿಗೆ ಮೊದಲ ಡೇಟ್ ಅನ್ನೂ ಫಿಕ್ಸ್ ಮಾಡಿದ್ದಾರೆ.
ಮೊದಲ ಡೇಟ್ಗಾಗಿ ಕುನ್ಲಿ ಪೂರ್ತಿ ರೆಸ್ಟೋರೆಂಟ್ನ್ನೇ ಬುಕ್ ಮಾಡಿದ್ದರಂತೆ. ಕೀಶಾ ಬರುವ ದಾರಿಗೆ ಗುಲಾಬಿ ದಳವನ್ನು ಹಾಕಲಾಗಿತ್ತು. ಆಕೆಯನ್ನು ಪ್ರತಿಕ್ಷಣವು ವಿಶೇಷವಾಗಿ ಟ್ರೀಟ್ ಮಾಡಿದ್ದರಂತೆ ಕುನ್ಲಿ. ಇಷ್ಟೆಲ್ಲವಾದರೂ ಕುನ್ಲಿ ಮೂಲ ತಿಳಿಯುವ ಪ್ರಯತ್ನವನ್ನು ಕೀಶಾ ಮಾಡಿರಲಿಲ್ಲ.
ಎರಡು ವರ್ಷಗಳ ನಂತರ ಕೀಶಾಳನ್ನು ಕುನ್ಲಿ ತನ್ನ ತಾಯಿಗೆ ಭೇಟಿ ಮಾಡಿಸಿದ್ದಾರೆ. ಆಗ ಅವರ ತಾಯಿ ಅವಳನ್ನು ರಾಜಕುಮಾರಿ ಎಂದು ಕರೆದಿದ್ದಾರೆ. ಒಮ್ಮೆ ಗೊಂದಲಕ್ಕೆ ಸಿಲುಕಿದ ಕೀಶಾ, ಬಹುಶಃ ಇದು ಪ್ರೀತಿಯಿಂದ ಹೇಳಿದ್ದಾಗಿರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ ಅದಾದ ನಂತರ ತಾಯಿ ತಮ್ಮ ಮಗನ ಬಗ್ಗೆ ಪೂರ್ತಿ ಕಥೆಯನ್ನು ಹೇಳಿದ್ದಾರೆ. ತಾನು ಪ್ರೀತಿಸುತ್ತಿರುವ ಹುಡುಗ ಒಬ್ಬ ರಾಜಕುಮಾರ ಎನ್ನುವುದು ಕೀಶಾಗೆ ಆಗ ಗೊತ್ತಾಗಿದೆ. ಇದಾದ ನಂತರ ಅವರಿಬ್ಬರ ಮದುವೆಯನ್ನು ಸಾಮಾನ್ಯರಂತೆ ನೆರವೇರಿಸಲಾಗಿದೆ. ಇದೀಗ ಅವರ ಮದುವೆಗೆ 14 ವರ್ಷಗಳ ತುಂಬಿದ ನಂತರ ರಾಜವಂಶದ ಮರ್ಯಾದೆಯೊಂದಿಗೆ ಮದುವೆಯಾಗುವ ಮನಸ್ಸನ್ನು ದಂಪತಿ ಮಾಡಿದ್ದಾರೆ. ಸದ್ಯದಲ್ಲೇ ಇವರಿಬ್ಬರ ಮದುವೆ ನಡೆಯಲಿದೆ. (ಏಜೆನ್ಸೀಸ್)