ಟಿ-20 ವಿಶ್ವಕಪ್ ಫೈನಲ್; 2016ರಲ್ಲಿ ವಿಲನ್ ಆದ ಬೆನ್​​ಸ್ಟೋಕ್ಸ್​ 2022ರಲ್ಲಿ ಹೀರೋ….

Ben Stokes
Published on

ಮೆಲ್ಬೋರ್ನ್​​: ಆಲ್​​ರೌಂಡರ್ ಬೆನ್​​ಸ್ಟೋಕ್ಸ್​ ಆಟದಿಂದ ಇಂಗ್ಲೆಂಡ್​ ತಂಡ 2022ರ ಟಿ-20 ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಪಾಕಿಸ್ತಾನ ನೀಡಿದ 138 ರನ್​ಗಳ ಸಾಧಾರಣ ಮೊತ್ತ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಉತ್ತಮವಾಗಿಯೇ ಬೌಲಿಂಗ್ ಮಾಡಿದ ಪಾಕಿಸ್ತಾನಿ ಬೌಲರ್​ಗಳು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರಿದರು.

ಇಂಗ್ಲೆಂಡ್​ನ ಒಬ್ಬೊಬ್ಬರೇ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ನತ್ತ ಹೆಜ್ಜೆ ಹಾಕುತ್ತಿದ್ದಂತೆ, ಪಂದ್ಯದ ಕುತೂಹಲ ಹೆಚ್ಚಾಗುತ್ತಾ ಸಾಗಿತು. ಈ ಸಂದರ್ಭದಲ್ಲಿ ಯಾವ ತಂಡ ಈ ಬಾರಿ ಕಪ್ ಗೆಲ್ಲಬಹುದು ಎಂಬುವುದನ್ನು ಊಹಿಸಲೂ ಸಾಧ್ಯವಾಗದ ಹಂತಕ್ಕೆ ಪಂದ್ಯ ಸಾಗಿತು.

ಇನ್ನೇನು ಪಂದ್ಯದ ಗೆಲುವು ಪಾಕಿಸ್ತಾನದ ಕಡೆಗೆ ಸಾಗುತ್ತಿದೆ ಎನ್ನುವಾಗಲೇ ಆಲ್​ರೌಂಡರ್​​ ಬೆನ್​​ಸ್ಟೋಕ್ಸ್​ ಜವಾಬ್ದಾರಿಯುತ ಆಟಕ್ಕೆ ಮುಂದಾದರು. ನಿಧಾನವಾಗಿ ಇನ್ನಿಂಗ್ಸ್​​ ಕಟ್ಟಲು ಮುಂದಾದರು. ಕ್ರಿಸ್ ಕಚ್ಚಿ ನಿಂತ ಸ್ಟೋಕ್ಸ್​​ ಪಾಕಿಸ್ತಾನದ ಬೌಲರ್​​ಗಳ ಮೇಲೆ ಒತ್ತಡ ಹೇರಲು ಆರಂಭಿಸಿದರು.

ಬೆನ್​ಸ್ಟೋಕ್ಸ್​ ಫೈನಲ್ ಪಂದ್ಯದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾಗದೇ ಇರುತ್ತಿದ್ದರೆ, ಇಂಗ್ಲೆಂಡ್​​ಗೆ ಗೆಲ್ಲುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಸ್ಟೋಕ್ಸ್​ 52 ರನ್​ ಗಳಿಸುವ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ 2022ರ ಟಿ-20 ವಿಶ್ವಕಪ್​ನ್ನು ಇಂಗ್ಲೆಂಡ್ ತಂಡ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅವತ್ತು ವಿಲನ್... ಇಂದು ಹೀರೋ..!

ಹೌದು, 2016ರ ಟಿ-20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​​ ತಂಡ ಫೈನಲ್ ಪ್ರವೇಶಿಸಿತ್ತು. ಅಂದಿನ ಬಲಿಷ್ಠ ವೆಸ್ಟ್​​ಇಂಡೀಸ್ ತಂಡ ಎದುರಾಳಿ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ವೆಸ್ಟ್​​ಇಂಡೀಸ್ ತಂಡಕ್ಕೆ ಗೆಲುವು ಕಷ್ಟವಾಗಿತ್ತು. ಆದರೆ ಕೊನೆಯಲ್ಲಿ ಆಗಿದ್ದೇ ಬೇರೆ.

ಕೊನೆಯ ಓವರ್​ನಲ್ಲಿ ವೆಸ್ಟ್​ಇಂಡೀಸ್ ತಂಡಕ್ಕೆ ಗೆಲ್ಲಲು 19 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೆನ್​ಸ್ಟೋಕ್ಸ್​ ಬೌಲಿಂಗ್ ಮಾಡುತ್ತಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಬ್ರಾತ್‌ವೈಟ್ ಸ್ಟೋಕ್ಸ್​ ಎಸೆತದಲ್ಲಿ ಒಂದರ ಹಿಂದೆ ಒಂದರಂತೆ 4 ಸಿಕ್ಸ್​ ಸಿಡಿಸುವ ಮೂಲಕ ವೆಸ್ಟ್​ಇಂಡೀಸ್ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದರು.

ಕೊನೆಯ ಓವರ್​ನಲ್ಲಿ 4 ಸಿಕ್ಸರ್ ನೀಡಿ, ಇಂಗ್ಲೆಂಡ್ ಸೋಲಿಗೆ ಪ್ರಮುಖ ಕಾರಣವಾಗಿದ್ದ ಬೆನ್​​ಸ್ಟೋಕ್ಸ್​ ಅಂದು ಸಾಕಷ್ಟು ಟೀಕೆ ಎದುರಿಸಿದ್ದರು. ಆದರೆ ಇದೀಗ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net