

ಮೆಲ್ಬೋರ್ನ್: ಇಂಗ್ಲೆಂಡ್ ತಂಡ ಟಿ-20 ವಿಶ್ವಕಪ್ನನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಬೌಲರ್ಗಳು ತೋರಿದ ಸಂಘಟಿತ ನಿರ್ವಹಣೆಯಿಂದಾಗಿ ಪಾಕಿಸ್ತಾನ ಅಲ್ಪ ಮೊತ್ತಕ್ಕೆ ಕುಸಿಯಿತು.
138 ರನ್ಗಳ ಸಾಧಾರಣ ಮೊತ್ತ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ತಂಡದ ಮೊತ್ತ 7 ರನ್ಗಳಾಗಿದ್ದಾಗ ಆರಂಭಿಕ ಬ್ಯಾಟ್ಸ್ಮನ್ ಅಲೆಕ್ಸ್ ಹೇಲ್ಸ್ 1 ರನ್ಗಳಿಸಿ ಶಾಹಿನ್ ಅಫ್ರಿದಿ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಫಿಲ್ ಸಾಲ್ಟ್ 7 ರನ್ಗಳಿಸಿ ಹ್ಯಾರಿಸ್ ರೌಫ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ವೇಳೆ ತಂಡವನ್ನು ಆಧರಿಸಿದ ನಾಯಕ ಜೋಸ್ ಬಟ್ಲರ್ ನಿಧಾನವಾಗಿ ಬಿರುಸಿನ ಆಟಕ್ಕೆ ಮುಂದಾದರು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಹ್ಯಾರಿಸ್ ರೌಫ್ ಬಟ್ಲರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 26 ರನ್ಗಳಿಸಿದ್ದ ವೇಳೆ ಬಟ್ಲರ್ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು.
ಬಟ್ಲರ್ ಔಟ್ ಆಗುತ್ತಿದ್ದಂತೆ ಬೆನ್ ಸ್ಟೋಕ್ಸ್ ಜತೆಯಾದ ಹ್ಯಾರಿ ಬ್ರುಕ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಮುಂದಾದರು. ಇವರ ಆಟ 20 ರನ್ ಗಳಿಸಿ ಅಂತ್ಯವಾಯಿತು.
ಪಾಕಿಸ್ತಾನದ ಬೌಲಿಂಗ್ ದಾಳಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಸವಾಲಾಗಿ ಪರಿಣಮಿಸಿತು. ಈ ವೇಳೆ ಆಲ್ರೌಂಡರ್ ಬೆನ್ಸ್ಟೋಕ್ಸ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನ ದಡ ದಾಟಿಸಿದರು. ಸ್ಟೋಕ್ಸ್ 52 ರನ್ ಗಳಿಸುವ ಮೂಲಕ ಅರ್ಧ ಶತಕ ಸಿಡಿಸಿ ಮಿಂಚಿದರು.