

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ತಿಳಿಗೇಡಿ ಯುವಕನ ಪ್ರಚೋದನಾತ್ಮಕ ಪೋಸ್ಟ್ನಿಂದ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ, ಕಿಡಿಗೇಡಿಗಳ ಜತೆಗೆ ಕೆಲ ಅಮಾಯಕರನ್ನೂ ಪೊಲೀಸರು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಉದ್ರಿಕ್ತ ಮತಿಗೇಡಿ ಯುವಕರು ಎಸಗಿದ ಕೃತ್ಯಕ್ಕೆ ಸಂಬಂಧವಿಲ್ಲದವರನ್ನೂ ವಶಕ್ಕೆ ಪಡೆಯಲಾಗಿದೆ. ಕೆಲ ಕುಟುಂಬಗಳ ತಂದೆ-ತಾಯಂದಿರು ನನಗೆ ನಿರಂತರವಾಗಿ ಮೊಬೈಲ್ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಪೊಲೀಸ್ ಠಾಣೆ, ಆಸ್ಪತ್ರೆ, ದೇವಾಲಯದ ಮೇಲೆ ಕಲ್ಲು ಹೊಡೆದವರನ್ನು ಬಿಡಬೇಡಿ. ಆದರೆ ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಸರಣಿ ಟ್ವಿಟ್ ಮೂಲಕ ಎಚ್ಡಿಕೆ ಮನವಿ ಮಾಡಿದ್ದಾರೆ.
ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆ ದೃಶ್ಯಗಳಲ್ಲಿ ಇಲ್ಲದವರನ್ನು ಬಿಟ್ಟು ಕಳಿಸಲಾಗುವುದು ಎಂದು ಪೊಲೀಸ್ ಆಯುಕ್ತರು ನನಗೆ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಗಲಾಟೆಗೆ ಸಂಬಂಧವಿಲ್ಲದ ಮುಗ್ಧರಿಗೆ ತೊಂದರೆ ಆಗುವುದು ಬೇಡ. ಅಂಜುಮನ್ ಸಂಸ್ಥೆ ಮುಖಂಡರ ಜತೆ ತೆರಳಿ ಪೊಲೀಸರಿಗೆ ಮನವಿ ಕೊಡಿ ಎಂದು ಈಗಾಗಲೇ ನಮ್ಮ ಪಕ್ಷದ ಮುಖಂಡರಿಗೂ ಸೂಚಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮುಗ್ಧರಿಗೆ ಅನ್ಯಾಯ ಆಗದಿರಲಿ ಎಂದು ಎಚ್ಡಿಕೆ ಕೋರಿದ್ದಾರೆ.
ಹುಬ್ಬಳ್ಳಿ ಸದಾ ಶಾಂತಿಯನ್ನು ಬಯಸುವ ನಗರ. ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯುಳ್ಳ ತಾಣ. ಕೆಲ ವರ್ಷಗಳಿಂದ ಇಲ್ಲಿ ಎಲ್ಲ ಸಮುದಾಯದವರು ಸಹೋದರರಾಗಿ ಬಾಳಿ ಬದುಕುತ್ತಿದ್ದಾರೆ. ಬವಣೆಯಲ್ಲಿ ಬೇಯುತ್ತಿರುವ ಬದುಕನ್ನು ಕಟ್ಟಿಕೊಳ್ಳುವ ಬದಲು ಕೋಮುದಳ್ಳುರಿ ಹರಡುವುದು ಬೇಡ ಎಂದು ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.