More

    BJP ಜತೆ ಡೀಲ್ ಕುದುರಿಸಿ ಡಿಂಗ್ ಡಾಂಗ್ ಹಾಡಿದ್ಯಾರಯ್ಯ? ಆ ಪಾಪದ ಕೂಸಿಗೆ ಹಾಲೆರೆದದ್ಯಾರಯ್ಯ? ಸಿದ್ದು ವಿರುದ್ಧ ಎಚ್​ಡಿಕೆ ಆಕ್ರೋಶ

    ಬೆಂಗಳೂರು: ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆಣಕಿದ್ದಾರೆ. ಅಪರೇಷನ್ ಕಮಲದ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷವನ್ನು ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಬಹಿರಂಗದಲ್ಲಿ ಮಾತ್ರ ಬಿಜೆಪಿ ಕೋಮುವಾದಿ! ಅಂತರಂಗದಲ್ಲಿ ಅದಕ್ಕೆ ನೀವು ಅಡ್ಜಸ್ಟ್‌ಮೆಂಟ್‌ ವಾದಿ!! ರಾಜಕೀಯ ಊಸರವಳ್ಳಿ, ಸಿದ್ದಕಲಾ ನಿಪುಣನೇ.. ನಿಮ್ಮ ರಾಜಕೀಯ ಲೀಲೆಗಳು ಒಂದಾ ಎರಡಾ? ಎಂದು ತಿವಿದಿದ್ದಾರೆ.

    ಉಂಡ‌ ಮನೆಗೆ ಪಂಗನಾಮ: 2008-2009ರಲ್ಲಿ 8 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕಿತ್ತೆಸೆಯಲು ಬಿಜೆಪಿ ಜತೆ ಡೀಲ್ ಕುದುರಿಸಿಕೊಂಡು ಡಿಂಗ್ ಡಾಂಗ್ ಹಾಡಿದ್ದು ಯಾರಯ್ಯ? ಹೆಸರಿನಲ್ಲಿ ‘ರಾಮʼ! ಉಂಡ ಮನೆಗೆ ಪಂಗನಾಮ!! ಸ್ವಯಂ ಘೋಷಿತ ಸತ್ಯಹರಿಶ್ಚಂದ್ರ ಎಂದು ಸಿದ್ದರಾಮಯ್ಯರನ್ನು ಎಚ್​ಡಿಕೆ ಕಾಲೆಳೆದಿದ್ದಾರೆ.

    ಅಪರೇಷನ್ ಕಮಲದ ಹಣ ಎಲ್ಲಿ?: ಆಪರೇಷನ್ ಕಮಲಕ್ಕೆ ಕೈ ಜೋಡಿಸಿದ್ದಕ್ಕೆ ದಕ್ಷಿಣೆಯಾಗಿ ಮುಟ್ಟಿದ ಹಣವೆಷ್ಟು? ಕೋಟಿಗಳ ಗಂಟು ತರಲು ಯಾರನ್ನು ಕಳಿಸಿದ್ದಿರಿ? ಆ ಹಣ ಏನಾಯಿತು? ಎಲ್ಲಿಗೆ ಹೋಯಿತು? ಚುನಾವಣೆಗೆ ಖರ್ಚು ಮಾಡಿದಿರಾ, ಇಲ್ಲಾ.. ಜೇಬಿಗಿಳಿಸಿ ಜಲ್ಸಾ ಮಾಡಿದಿರಾ? ಅದು ರಾಮನ ಲೆಕ್ಕದಲ್ಲಿದಿಯಾ? ಅಥವಾ ಕೃಷ್ಣನ ಲೆಕ್ಕದಲ್ಲಿಯಾ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಎಚ್​ಡಿಕೆ, ಆಪರೇಷನ್ ಕಮಲದ ಬಾಬ್ತಿನ ಹಣ ಸ್ವೀಕರಿಸಿ ನಿಮಗೆ ತಂದುಕೊಟ್ಟ ನಿಮ್ಮ ಆ ಹಳೆಯ ಸ್ನೇಹಿತರೇ ಸ್ವತಃ ನನ್ನ ಬಳಿ ಬಿಚ್ಚಿಟ್ಟ ಕಟುಸತ್ಯವಿದು! ಎಷ್ಟೇ ಆದರೂ, ಸತ್ಯ ನಿಮಗೆ ಅಪಥ್ಯ ಅಲ್ಲವೇ? ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂಬ ಹುಂಬುತನವೇ? ಅಬ್ಬಬ್ಬಾ.. ನಿಮಗೆ ನೀವೇ ಸಾಟಿ ಎಂದು ಟಾಂಗ್ ಕೊಟ್ಟಿದ್ದಾರೆ.

    ಪರ್ಸೆಂಟೇಜ್ ಪಿತಾಮಹ: ದೇವೇಗೌಡರ ನೈತಿಕತೆ ಬಗ್ಗೆ ಪ್ರಶ್ನಿಸುವ ಸಿದ್ದಹಸ್ತನೇ, ನೀವೇ ‘ಪರ್ಸಂಟೇಜ್ ವ್ಯವಹಾರದ ಪಿತಾಮಹ’. ‘ಅರ್ಕಾವತಿ ರೀಡೂ ರಿಂಗ್ʼಮಾಸ್ಟರ್ ಆಗಿ ಅಡ್ಡಡ್ಡ ನುಂಗಿ ಕೆಂಪಣ್ಣ ಆಯೋಗದ ಕೃಪೆಯಿಂದ ಪಾರಾದ ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ? ಎಂದು ಲೇವಡಿ ಮಾಡಿದ್ದಾರೆ. ಜೆಡಿಎಸ್ 30 ಸೀಟಿನ ಪಕ್ಷವಲ್ಲ, 123 ಕ್ಷೇತ್ರಗಳ ಸವಾಲು ಸ್ವೀಕರಿಸಿ ಹೊರಟ ಪಕ್ಷ. ಇದು ಗೊತ್ತಾಗಿಯೇ ಪಕ್ಷವಾತ ಬಂದ ಹಾಗೆ ನೀವು ಚಡಪಡಿಸುತ್ತಿದ್ದೀರಿ. ಕದ್ದಮಾಲು ಕೈಗೆ ಕಟ್ಟಿ ಸಿಎಂ ಕುರ್ಚಿಯಲ್ಲಿ ನಿರ್ಲಜ್ಜವಾಗಿ ಮೆರೆದ ನಿಮ್ಮ ಕತ್ತಲೆಚಾರಿತ್ರ್ಯ ಕೊಳೆತು ನಾರುತ್ತಿದೆ. ನಿಮ್ಮ ಕೈಲಿ ಮಿರಮಿರ ಮಿಂಚಿದ ಹ್ಯೂಬ್ಲೆಟ್ ವಾಚ್ ಎಲ್ಲಿಂದಾ ಬಂತು? ಕಳ್ಳಮಾಲು ಮಾಲೀಕನಿಗೆ ಸೇರದೆ ನಿಮ್ಮ ಅಮೃತಹಸ್ತ ಅಲಂಕರಿ’ಸಿದ್ದು’ ಹೇಗೆ? ಆ ವಾಚ್ ತಂದ್ಕೊಟ್ಟ ಪೊಲೀಸಯ್ಯನಿಗೆ ವರ್ಗಾವಣೆ ಕೃಪೆ ಕರುಣಿಸಿದಿರಾ? ಎಂದು ಎಚ್​ಡಿಕೆ ಖಾರವಾಗಿಯೇ ಕೇಳಿದ್ದಾರೆ. ನಿಮ್ಮ ಕತ್ತಲೆ ಮುಖವಾಡ- ‘ಪರ್ಸಂಟೇಜ್ ಪಲ್ಲಕ್ಕಿ’ಯಲ್ಲಿ ಪವಡಿಸಿದ ನಿಮ್ಮ ನಿಜಬಣ್ಣ ಇನ್ನೇನು ಕಳಚಿಬೀಳಲಿದೆ. ನಿಮ್ಮ ಸುಳ್ಳು ನಿಮ್ಮನ್ನೇ ಸುಡುವ ಕಾಲ ಸನಿಹದಲ್ಲಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

    ನಾನು ಶಾಸಕ, ಸಚಿವ, ಡಿಸಿಎಂ ಆಗಿದ್ದೀನಿ… ಆದ್ರೆ ನನ್ನನ್ನು ಈಗಲೂ ದೇವಸ್ಥಾನಕ್ಕೆ ಸೇರಿಸಲ್ಲ: ಡಾ.ಪರಮೇಶ್ವರ್

    545 PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಕಲಬುರಗಿ ಬಿಜೆಪಿ ನಾಯಕಿಯ ಪತಿ ಅರೆಸ್ಟ್

    ಸನ್ನಿ ಲಿಯೋನ್​ ಫ್ಯಾನ್ಸ್​ಗೆ ಬಂಪರ್​ ಆಫರ್​ ಕೊಟ್ಟ ಮಂಡ್ಯದ ಯುವಕ! ಆದ್ರೆ ಈ 3 ಷರತ್ತು ಪೂರೈಸಲೇಬೇಕು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts