ಕೈಯೊಳಗೆ ಆರದ ಕೆಂಡ! ಭುಸುಗುಡುತ್ತಿದೆ ಬಣ, ಶಕ್ತಿ ಪ್ರದರ್ಶನಕ್ಕೆ ನಡೆದಿದೆ ತೆರೆಮರೆ ಯತ್ನ

DK Siddu Surjewala
Published on

ಬೆಂಗಳೂರು: ಪವರ್ ಶೇರಿಂಗ್ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಎದ್ದಿದ್ದ ಅಸಮಾಧಾನದ ಕಿಡಿಯನ್ನು ಆರಿಸುವ ಪ್ರಯತ್ನದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರಾದರೂ, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿರುವುದು ಇನ್ನೂ ಎಲ್ಲ ಮುಗಿದಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.

ಸೋಮವಾರ ಇಡೀ ದಿನ ನಡೆದ ಬೆಳವಣಿಗೆ ಬಳಿಕ ಹೈಕಮಾಂಡ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂಬ ಸಂದೇಶ ಸಾರಿದ್ದರೂ ಒಂದು ಬಣ ಇನ್ನೂ ಭುಸುಗುಡುತ್ತಲೇ ಇದೆ. ಸಮಯ ಸಂದರ್ಭ ನೋಡಿಕೊಂಡು ಪುನಃ ತನ್ನ ಶಕ್ತಿ ಪ್ರದರ್ಶನ ನಡೆಸಲು ಬಯಸಿದೆ ಎಂಬ ಸುದ್ದಿ ಕೈಪಾಳಯದಲ್ಲೇ ಹರಿದಾಡುತ್ತಿದೆ.

ಆಗದ ಚರ್ಚೆ: ಸೋಮವಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ಐವರು ಶಾಸಕರನ್ನು ವಿಜಯವಾಣಿ ಮಾತಿಗೆಳೆದಾಗ ಚರ್ಚೆಯಾಗಬೇಕಾದ ವಿಷಯ ಪ್ರಸ್ತಾಪವೇ ಆಗಲಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಜತೆಗೆ ಪಕ್ಷದ ರಾಜ್ಯ ಉಸ್ತುವಾರಿ ಮಾತುಗಳನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅಂತಹ ಬೆಳವಣಿಗೆಗಳೇ ನಡೆದಿಲ್ಲ ಎಂಬುದನ್ನು ಖಾತ್ರಿಪಡಿಸಿದರು.

ಪವರ್ ಶೇರಿಂಗ್ ವಿಚಾರದಲ್ಲಿ ಗೊಂದಲ ಆಗಿರುವ ಕಾರಣ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗದೇ ಇದ್ದರೂ ಆ ವಿಚಾರದಲ್ಲಿ ಸಂದೇಶವೊಂದು ಬರಬಹುದೆಂದು ನಿರೀಕ್ಷೆ ಮಾಡಿದ್ದೆವು, ಅದು ಆಗಲಿಲ್ಲ. ಎಸ್ಸಿಎಸ್ಟಿ ಸಮಾವೇಶ ನಡೆಸುವ ಬಗ್ಗೆ ಕರೆದು ಮಾತನಾಡುತ್ತಾರೆ, ತಮ್ಮ ನಿಲುವು ಹೊರಹಾಕುತ್ತಾರೆಂದುಕೊಂಡಿದ್ದೆವು, ಅದೂ ಆಗಲಿಲ್ಲ ಎಂದು ಹಿರಿಯ ಶಾಸಕರು ಅಭಿಪ್ರಾಯಪಟ್ಟರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಪಸ್ಥಿತಿಯಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗುವಷ್ಟು ಮಹತ್ವ ಇರುತ್ತದೆ. ಇಲ್ಲಿ ಒಂದೂವರೆಗಂಟೆಗೆ ಮುಗಿಸಿದರೆ ಹೇಗೆ? ಕನಿಷ್ಠ ಅರ್ಧ ದಿನವಾದರೂ ನಡೆಯಬೇಕು. ವೇದಿಕೆಯಲ್ಲಿರುವವರೇ ಮುಕ್ಕಾಲು ತಾಸು ಮಾತನಾಡುತ್ತಾರೆ, ಚರ್ಚೆ ಮಾಡಲು ಶಾಸಕರು ಸಿದ್ಧರಿದ್ದರೂ ನಾಯಕರ ಮಾತು ಸ್ವೀಕರಿಸಲು ತಯಾರಿಲ್ಲ ಎಂದು ಪರಿಷತ್​ನ ಹಿರಿಯ ಸದಸ್ಯರೊಬ್ಬರು ಬೇಸರ ಹೊರಹಾಕಿದ್ದಾರೆ.

ಸಿಎಂ ಜತೆ ಜಾರಕಿಹೊಳಿ ಸಮಾಲೋಚನೆ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸೇರಿ ಕೆಲವು ಶಾಸಕರು ಮಂಗಳವಾರ ಸಿಎಂರನ್ನು ಭೇಟಿ ಮಾಡಿ ಸಂಕ್ರಾಂತಿ ಶುಭಾಶಯ ಕೋರಿದರು. ಸತೀಶ್ ಜಾರಕಿಹೊಳಿ ಜತೆ ಸಿಎಂ ಅರ್ಧತಾಸು ಸಮಾಲೋಚನೆ ನಡೆಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜತೆಗಿನ ಚರ್ಚೆಗಳು ಹಾಗೂ ಶಾಸಕಾಂಗ ಪಕ್ಷ ಸಭೆಯ ಬೆಳವಣಿಗೆ ಕುರಿತು ಅವರಿಬ್ಬರೂ ಮಾತನಾಡಿದ್ದಾಗಿ ತಿಳಿದು ಬಂದಿದೆ.

ದೆಹಲಿಯಲ್ಲಿ ಸಭೆ: ಪರಿಷತ್​ನ ನಾಲ್ಕು ಸ್ಥಾನಗಳ ಭರ್ತಿ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೇ ಶೀಘ್ರ ಸಭೆ ನಡೆಸಿ ಸಂಭಾವ್ಯರ ಪಟ್ಟಿ ಸಿದ್ಧಪಡಿಸಿಕೊಳ್ಳಲಿದ್ದಾರೆ. ಬಳಿಕ ಇಬ್ಬರೂ ದೆಹಲಿಗೆ ತೆರಳುವರು. ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸುರ್ಜೆವಾಲ ಉಪಸ್ಥಿತಿಯಲ್ಲಿ ಸಭೆ ನಡೆಸುವರು. ಈ ಸಂದರ್ಭದಲ್ಲಿ ಎಸ್ಸಿಎಸ್ಟಿ ಸಮಾವೇಶದ ಅಗತ್ಯವನ್ನು ಪ್ರತಿಪಾದಿಸುವ ಸಾಧ್ಯತೆ ಇದೆ.

ಇಷ್ಟಕ್ಕೆ ನಿಲ್ಲುವುದಿಲ್ಲ: ಶಾಸಕಾಂಗ ಪಕ್ಷದ ಸಭೆಯಲ್ಲಿ ಏನೋ ಆಗಿಹೋಯಿತೆಂಬುದೆಲ್ಲ ಗಾಳಿಸುದ್ದಿ. ಸಿದ್ದರಾಮಯ್ಯ ತ್ಯಾಗದ ಮಾತನಾಡಿದ್ದಾರೆಂಬುದು ಊಹೆಯಷ್ಟೇ. ಅವರಾಡಿದ ಮಾತನ್ನು ಬೇರೆ ಬೇರೆ ರೀತಿ ವಿಶ್ಲೇಷಿಸಿಕೊಳ್ಳಬಹುದಷ್ಟೆ. ಇನ್ನು ಮುಂದೆ ಬಹಿರಂಗ ಚರ್ಚೆ ಬೇಡ, ಹೈಕಮಾಂಡ್ ಏನೇ ತೀರ್ವನಿಸಿದರೂ ಒಪ್ಪಿಕೊಳ್ಳಬೇಕು ಎಂದು ಸಿಎಂ, ಡಿಸಿಎಂ ಅವರು ಸುರ್ಜೆವಾಲ ಮೂಲಕ ಸಮ್ಮತಿಸಿರುವುದಷ್ಟೇ ಪ್ರಮುಖ ಸಂಗತಿ ಎಂದು ಶಾಸಕರೊಬ್ಬರು ಸಭೆಯ ಸಾರವನ್ನು ವಿವರಿಸಿದರು. ಜತೆಗೆ ಈ ಬೆಳವಣಿಗೆ ಇಷ್ಟಕ್ಕೆ ನಿಲ್ಲುವುದಿಲ್ಲ ಎಂಬುದನ್ನೂ ಸೂಚ್ಯವಾಗಿ ತಿಳಿಸಿದರು.

ಎಸ್ಸಿಎಸ್ಟಿ ಸಚಿವ, ಶಾಸಕರ ಸಭೆ, ಸಮಾವೇಶಕ್ಕೆ ಅಡ್ಡಿಪಡಿಸಲಾಗಿದೆ ಎಂಬ ಸಂಗತಿ ಮುಂದಿನ ದಿನಗಳಲ್ಲಿ ಬೇರೆ ಸ್ವರೂಪ ಪಡೆದುಕೊಳ್ಳಲು ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪವರ್ ಶೇರಿಂಗ್ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂದರ್ಶನವೊಂದರಲ್ಲಿ ಅಭಿಪ್ರಾಯ ಹೊರಹಾಕಿದ ಬಳಿಕ ಸಿಎಂ ಆಪ್ತ ಸಚಿವರು, ಶಾಸಕರ ಕಡೆಯಿಂದ ಪ್ರತಿರೋಧದ ನಡೆ ಆರಂಭವಾಯಿತು. ಹಾಸನ ಸಮಾವೇಶದ ಸ್ವರೂಪ ಬದಲಿಸಿದ್ದು, ಈಗ ಸಭೆ ನಿಲ್ಲಿಸಿದ್ದು ಎಲ್ಲವೂ ಅಷ್ಟು ಸಲೀಸಾಗಿ ಬದಿಗೆ ಸರಿಸುವ ವಿಚಾರವಲ್ಲ ಎಂಬ ವಾದವನ್ನು ಅವರು ಮುಂದಿಡುತ್ತಾರೆ.

ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಹೇಳಿದ್ದೆ, ಈಗ ಸಿಎಂ ಕುರ್ಚಿ ಖಾಲಿ ಇಲ್ಲವಲ್ಲ. ಏನಿದೆಯೋ ಅದನ್ನ ಹೇಳಬೇಕಲ್ಲವಾ? ಸಿದ್ದರಾಮಯ್ಯ ಸಿಎಂ ಆಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ.

- ಎಂ.ಬಿ.ಪಾಟೀಲ, ಕೈಗಾರಿಕೆ ಸಚಿವ

ಡಿನ್ನರ್ ಮೀಟಿಂಗ್ ವಿಚಾರವಾಗಿ ಎಐಸಿಸಿ ಪ್ರಧಾನಕಾರ್ಯದರ್ಶಿ ಜೊತೆ ಮಾತನಾಡಲಾಗಿಲ್ಲ. ಆದರೆ, ಅವರಿಗೆ ವಿವರಣೆ ಕೊಡುತ್ತೇವೆ. ಅವರು ನಮ್ಮ ಹೈಕಮಾಂಡ್, ಅವರ ಜತೆ ರ್ಚಚಿಸಿ ನಿರ್ಧಾರ ಮಾಡುತ್ತೇವೆ. ಒನ್ ಮ್ಯಾನ್, ಒನ್ ಪೋಸ್ಟ್ ವಿಚಾರ ಚರ್ಚೆಗೆ ಬರಲಿಲ್ಲ.

| ಜಿ.ಪರಮೇಶ್ವರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net