ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ... ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

mother
Published on

ವಿಜಯಪುರ: ಒಂದೆಡೆ ಕರೊನಾಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದರೆ, ಇನ್ನೊಂದೆಡೆ ನಾನ್ ಕೋವಿಡ್ ರೋಗಿಗಳ ಪರಿಸ್ಥಿತಿಯೂ ಕರುಣಾಜನಕವಾಗಿದೆ ಎಂಬುದಕ್ಕೆ ವಿಜಯಪುರದಲ್ಲಿ ನಡೆದ ಘಟನೆಯೇ ಸಾಕ್ಷಿ.

ಬಬಲೇಶ್ವರ ಪಟ್ಟಣದ ಹಣಮವ್ವ ಕೊರವರ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಆಕೆಯನ್ನು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ದರೂ ಎಲ್ಲಿಯೂ ದಾಖಲಿಸಿಕೊಂಡಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಅಷ್ಟೊತ್ತಿಗಾಗಲೇ ಮಗುವಿನ ಕಾಲು ಹೊರಬಂದಿದ್ದು, ದಯವಿಟ್ಟು ತಾಯಿ-ಮಗುವಿನ ಪ್ರಾಣ ಉಳಿಸಿ ಕುಟುಂಬಸ್ಥರು ಆಸ್ಪತ್ರೆ ಬಳಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಹಣಮವ್ವನನ್ನು ಆರಂಭದಲ್ಲಿ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ವಿಜಯಪುರಕ್ಕೆ ಕರೆದೊಯ್ಯಲು ತಿಳಿಸಿದ್ದರು. ಅಲ್ಲಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ಹಣಮವ್ವನನ್ನು ಕರೆದುಕೊಂಡು ಬಂದರೆ ವೈದ್ಯರು ಸ್ಪಂದಿಸಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ಆಸ್ಪತ್ರೆಯ ವೈದ್ಯನಿಗೇ ಕರೊನಾ ಸೋಂಕು ತಗುಲಿದ್ದರಿಂದ ಅವರೂ ಹಿಂದೇಟು ಹಾಕಿದ್ದಾರೆ. ಅಷ್ಟರಲ್ಲಿ ಮಗುವಿನ ಕಾಲು ಹೊರಬಂದಿತ್ತು. ಕುಟುಂಬಸ್ಥರು ಆತಂಕಕ್ಕೆ ಒಳಗಾಗಿ ಆಸ್ಪತ್ರೆ ಸುತ್ತಲೂ ಸಹಾಯ ಮಾಡಿ ಎಂದು ಗೋಳಾಡುತ್ತಿದ್ದರು. ಮಗುವಿನ ಕಾಲು ಹೊರ ಬಂದಿದೆ.. ಕೈ ಮುಗಿತೀವಿ​.. ತಾಯಿ-ಮಗುವಿನ ಜೀವ ಉಳಿಸಿ... ಎಂದು ಗೋಗರೆಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಈ ಸುದ್ದಿ ಜಿಲ್ಲಾಡಳಿತಕ್ಕೆ ಮುಟ್ಟಿದ್ದು, ಕೂಡಲೇ ಅದೇ ಖಾಸಗಿ ಆಸ್ಪತ್ರೆಗೆ ಬೇರೆ ವೈದ್ಯರನ್ನು ಕರೆಯಿಸಿ ಹೆರಿಗೆ ಮಾಡಿಸಲಾಗಿದೆ. ಆದರೆ ಮಗು ಬದುಕುಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ವೈದ್ಯರಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net