

ಚಾಮರಾಜನಗರ: ಕೆಲಸಕ್ಕೆ ಕರೆಯಲೆಂದು ಕೂಲಿಕಾರ್ಮಿಕನ ಮನೆಯತ್ತ ಬೆಳ್ಳಂಬೆಳಗ್ಗೆ ಬಂದ ವ್ಯಕ್ತಿ ಬಾಗಿಲು ಬಡಿಯುತ್ತಿದ್ದರೂ ಯಾರೊಬ್ಬರೂ ತೆರೆಯಲಿಲ್ಲ. ಇನ್ನೂ ಮಲಗಿರಬೇಕೆಂದು ಕಿಟುಕಿಯತ್ತ ಇಣುಕಿ ನೋಡಿದ ಆ ವ್ಯಕ್ತಿಗೆ ಮನೆಯೊಳಗೆ ಕಂಡದ್ದು ನಾಲ್ವರ ಶವ!
ಇಂತಹ ಘಟನೆ ಚಾಮರಾಜನಗರ ತಾಲೂಕಿನ ಎಚ್. ಮೂಕಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕೂಲಿ ಕೆಲಸ ಮಾಡುತ್ತಿದ್ದ ಮಹದೇವಪ್ಪನನ್ನ ಕೆಲಸಕ್ಕೆ ಕರೆದೊಯ್ಯಲು ಬಂದಾಗ ಆ ಮನೆಯ ಒಳಗೆ ಮಹದೇವಪ್ಪ(46), ಇವರ ಪತ್ನಿ ಮಂಗಳಮ್ಮ (35), ಮಕ್ಕಳಾದ ಜ್ಯೋತಿ (14), ಶ್ರುತಿ (12) ಮೃತದೇಹಗಳು ನೇತಾಡುತ್ತಿದ್ದವು. ಗಂಡನ ಮನೆಯಲ್ಲಿದ್ದ ಮಗಳೊಂದಿಗೆ ರಾತ್ರಿ ಮೊಬೈಲ್ ಮೂಲಕ ಮಾತನಾಡಿದ್ದ ಮಹದೇವಪ್ಪ ದಂಪತಿ ಇಬ್ಬರೂ ಮತ್ತಿಬ್ಬರು ಹೆಣ್ಣುಮಕ್ಕಳ ಜತೆ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದು, ಊರಿಗೇ ಊರೆ ಬೆಚ್ಚಿಬಿದ್ದಿದೆ. ಇದನ್ನೂ ಓದಿರಿ ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ನೇಣುಬಿಗಿದ ಸ್ಥಿತಿಯಲ್ಲಿದ್ದ ನಾಲ್ವರ ಶವಗಳನ್ನ ಪರಿಶೀಲಿಸಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ದಿವ್ಯಾ ಸಾರಾಥಾಮಸ್, ಮಹದೇವಪ್ಪಗೆ ಮೇ 9ರಂದು ಕರೊನಾ ಪಾಸಿಟಿವ್ ಆಗಿತ್ತು. ಆಶಾ ಕಾರ್ಯಕರ್ತೆ ಪ್ರಕಾರ ಕುಟುಂಬದ ಇತರ ಸದಸ್ಯರಿಗೆ ಪಾಸಿಟಿವ್ ಆಗಿರಲಿಲ್ಲ. ಎಲ್ಲರ ಶವಗಳು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕೊನೆಯ ಬಾರಿ ಗಂಡನ ಮನೆಯಲ್ಲಿರುವ ಹಿರಿಯ ಮಗಳ ಜತೆ ಮಹದೇವಪ್ಪ ಮಂಗಳವಾರ ರಾತ್ರಿ ಫೋನ್ನಲ್ಲಿ ಮಾತನಾಡಿದ್ದಾರೆ. ಮಗಳನ್ನು ಸದ್ಯಕ್ಕೆ ಬರುವುದು ಬೇಡ ಎಂದು ಹೇಳಿದ್ದರಂತೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಬಳಿಕ ಕಾರಣ ಗೊತ್ತಾಗಲಿದೆ ಎಂದರು.
ಗ್ರಾಮಸ್ಥರು ಹೇಳುವಂತೆ ಕರೊನಾ ಸೋಂಕು ತಗುಲಿದ್ದರಿಂದ ಪರಿಚಿತರು ತಿರಸ್ಕಾರ ಮನೋಭಾವದಿಂದ ನೋಡುತ್ತಿದ್ದಾರೆ ಎಂದು ಮಹದೇವಪ್ಪ ಕುಟುಂಬ ಮಾನಸಿಕವಾಗಿ ನೊಂದಿತ್ತು. 20 ದಿನದಿಂದ ಡೇರಿಗೆ ಹಾಲು ಹಾಕುವುದನ್ನೂ ಮಹದೇವಪ್ಪ ನಿಲ್ಲಿಸಿದ್ದರು. ಕೋವಿಡ್ ಪಾಸಿಟಿವ್ ಆದ ನಂತರ ಕೂಲಿ ಕೆಲಸಕ್ಕೂ ಹೋಗಲಾಗದೆ ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದರು. ಇದರಿಂದ ಮನನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾಗಿದೆ.