

ಬೀದರ್: ಅಮ್ಮನಿಗೆ ಕರೊನಾ ಸೋಂಕು ತಗುಲಿ ಸತ್ತು ಹೋದಳು ಎಂಬ ಸುದ್ದಿ ತಿಳಿಯುತ್ತಿದ್ದಂತೆ ವಿದೇಶದಲ್ಲಿದ್ದ ಮಗ ತವರಿಗೆ ಬಂದಿದ್ದ. ಇದೀಗ ಆ ಮಗನೂ ದುರಂತ ಅಂತ್ಯ ಕಂಡ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಬೀದರ್ ನಗರದ ಬಸವ ನಗರ ನಿವಾಸಿ ಪಾರ್ವತಿ ಶೇಷಪ್ಪ ಪಾಟೀಲ(55) ಮತ್ತು ಇವರ ಪುತ್ರ ಶಿವಕಾಂತ ಪಾಟೀಲ್ (30) ಮೃತ ದುರ್ದೈವಿಗಳು. ಶಿಕ್ಷಕಿಯಾಗಿದ್ದ ಪಾರ್ವತಿ ಅವರು ಇತ್ತೀಚಿಗೆ ಕರೊನಾ ಸೋಂಕಿಗೆ ಬಲಿಯಾದರು.ಕೆನಡಾದಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ಶಿವಕಾಂತ ಪಾಟೀಲ್ ಅಮ್ಮನ ಸಾವಿನ ಸುದ್ದಿ ಕೇಳಿ ಬೀದರ್ಗೆ ಬಂದಿದ್ದರು.
ಆಗ ಶಿವಕಾಂತ ಪಾಟೀಲ್ಗೂ ಕರೊನಾ ಪಾಸಿಟಿವ್ ದೃಢಪಟ್ಟಿತ್ತು. ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಶಿವಕಾಂತ ಕೊನೆಯುಸಿರೆಳೆದಿದ್ದಾರೆ. ತಾಯಿ-ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.