

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಬುಧವಾರ ತಡರಾತ್ರಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರಂತ ಅಂತ್ಯಕಂಡಿದ್ದಾರೆ. ರಸ್ತೆಮಧ್ಯೆ ಶವಗಳು ರಕ್ತಿಕ್ತವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಹೊಳಲ್ಕೆರೆ ತಾಲೂಕಿನ ಬಿ.ದುರ್ಗಾ ಗ್ರಾಮದ ನಾಗರಾಜ್ ಮತ್ತು ಶೈಲಜಾ(38) ದಂಪತಿ ಹಾಗೂ ಇವರ ಮಕ್ಕಳಾದ ವೀರೇಶ್(15), ಸಂತೋಷ(13) ಮೃತ ದುರ್ದೈವಿಗಳು. ನಾಗರಾಜ್ ಅವರು ಕುಟುಂಬ ಸಮೇತ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಜಾತ್ರೆಗೆ ತೆರಳಿದ್ದರು. ವಾಪಸ್ ಬುಧವಾರ ರಾತ್ರಿ ಒಂದೇ ಬೈಕ್ನಲ್ಲಿ ನಾಲ್ವರೂ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು.
ಮಾರ್ಗಮಧ್ಯೆ ಖಾಸಗಿ ಬಸ್ ರೂಪದಲ್ಲಿ ಬಂದ ಜವರಾಯ ನಾಲ್ವರ ಪ್ರಾಣ ಹೊತ್ತೊಯ್ದಿದ್ದಾನೆ. ವೇಗವಾಗಿ ಬಂದ ಖಾಸಗಿ ಬಸ್, ದಾಮ್ಮಿ ಗ್ರಾಮದ ಬಳಿ ಏಕಾಏಕಿ ಬಲಬದಿಗೆ ನುಗ್ಗಿ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದವರ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಇಬ್ಬರು ಮಕ್ಕಳು ಮತ್ತು ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಹೊಳಲ್ಕೆರೆ ಗ್ರಾಮಾಂತರ ಪೊಲೀಸರು ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ತಂದೆ-ತಾಯಿ-ಮಕ್ಕಳ ಸಾವಿನ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ನೀರವ ಮವನ ಆವರಿಸಿದೆ.