ಕೆಎಸ್ಸಾರ್ಟಿಸಿ-ಕಾರಿನ​ ನಡುವೆ ಭೀಕರ ಅಪಘಾತ: 5 ವಿದ್ಯಾರ್ಥಿಗಳು ದುರ್ಮರಣ, ಸಾವಲ್ಲೂ ಒಂದಾದ ಸ್ನೇಹಿತರು...

belur accident death case
Published on

ಬೇಲೂರು: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಸಂಕೇನಹಳ್ಳಿ ಸಮೀಪ ಮಂಗಳವಾರ ಮಧ್ಯಾಹ್ನ ಕೆಎಸ್​ಆರ್​ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ. ಮೃತರೆಲ್ಲರೂ ವಿದ್ಯಾರ್ಥಿಗಳು.

ಅಕ್ಮಲ್, ಜಿಲಾನಿ, ಖೈಫ್, ಮೋಹಿನ್ ಮತ್ತು ರಿಯಾನ್​ ಮೃತ ದುರ್ದೈವಿಗಳು. ಮೊಹೀನ್ ಮತ್ತು ರಿಯಾನ್ ,ಹಾಸನದ ಎನ್​ಡಿಆರ್​ಕೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದರು. ಬೇಲೂರಿನ ವಿದ್ಯಾವಿಕಾಸ ಕಾಲೇಜಿನಲ್ಲಿ ಮೊಹಮ್ಮದ್ ಖೈಫ್, ಮೊಹಮ್ಮದ್ ಜಿಲಾನಿ ಮತ್ತು ಅಕ್ಮಲ್ ಓದುತ್ತಿದ್ದರು. ಬೇಲೂರಿನ ನಿವಾಸಿಗಳಾಗಿದ್ದ ಇವರೆಲ್ಲರೂ ಸ್ನೇಹಿತರು. ‘

ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್​ಟಿಸಿ ಬಸ್ ಮತ್ತು ಬೇಲೂರಿನಿಂದ ಹಾಸನದತ್ತ ಹೊರಟಿದ್ದ ಆಲ್ಟೋ ಕಾರು ಹಾರೋಹಳ್ಳಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರರು ಸ್ಥಳದಲ್ಲೇ ದುರ್ಮರಣಕ್ಕೀಡಾದರು. ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತ್ತಾದರೂ ಮಾರ್ಗದಲ್ಲೇ ಕೊನೆಯುಸಿರೆಳೆದ. ಅಪಘಾತದ ತೀವ್ರತೆ ಹೇಗಿತ್ತೆಂದರೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿ, ನಾಲ್ವರ ಶವಗಳನ್ನ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಒಂದು ತಾಸಿನವರೆಗೂ ಮೃತರ ಗುರುತು ಕೂಡ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಓರ್ವನ ಕಾಲೇಜು ಐಡಿ ಕಾರ್ಡ್ ಮೂಲಕ ಮೃತರ ಗುರುತು ಪತ್ತೆ ಮಾಡಲಾಯಿತು.

ಕಾಲೇಜಿಗೆ ತೆರಳಿದ್ದ ಮಕ್ಕಳು ಅಪಘಾತದಲ್ಲಿ ಸತ್ತ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಬಂದೆರಗಿದೆ. ಮೃತದೇಹಗಳನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆ ಬಳಿ ಪಾಲಕರು-ಸಂಬಂಧಿಕರು ದೌಡಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಬೇಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net