ಪಾವಗಡ ಖಾಸಗಿ ಬಸ್​ ದುರಂತ, ನಾಲ್ವರು ಅಧಿಕಾರಿಗಳ ಅಮಾನತು: ಶೀರಾಮುಲು

B Sriramulu
Published on

ಬೆಂಗಳೂರು: ಪಾವಗಡ ತಾಲೂಕು ಪಳವಳ್ಳಿ ಕಟ್ಟೆಯಲ್ಲಿ ಸಂಭವಿಸಿದ ಖಾಸಗಿ ಬಸ್​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇನ್ಮುಂದೆ ಬಸ್​ಗಳ ಟಾಪ್​ನಲ್ಲಿ ಕುಳಿತು ಪ್ರಯಾಣ ಮಾಡುವುದಕ್ಕೆ ಕಡಿವಾಣ ಹಾಕುತ್ತೇವೆ. ಪಳವಳ್ಳಿ ಕಟ್ಟೆಯಲ್ಲಿ ಸಂಭವಿಸಿದ ಖಾಸಗಿ ಬಸ್​ ಅಪಘಾತ ಸಂಬಂಧ ಉನ್ನತ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಸೋಮವಾರ ಶೂನ್ಯವೇಳೆ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್​ ಪ್ರಸ್ತಾಪಕ್ಕೆ ಉತ್ತರಿಸಿದ ಶ್ರೀರಾಮುಲು, ಬಸ್​ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿರುವುದರಿಂದ ಅಮಾನತು ಮಾಡಲಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಪಾವಗಡ, ತುಮಕೂರು ಮತ್ತು ಬೆಂಗಳೂರು ಆಸ್ಪತ್ರೆ ಕಳುಹಿಸಿಕೊಟ್ಟಿದ್ದೇನೆ. ಘಟನೆಯಲ್ಲಿ ಮೃತಪಟ್ಟವರ ಮನೆಗೆ ತೆರಳಿ 5 ಲಕ್ಷ ರೂ. ಪರಿಹಾರ ಹಾಗೂ ವೈಯಕ್ತಿಕವಾಗಿ ಒಂದು ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.

ಪಾವಗಡದಲ್ಲಿ 14 ಸರ್ಕಾರಿ ಬಸ್​ ಸೇರಿ 26 ಬಸ್​ ಸಂಚರಿಸುತ್ತವೆ. ಅವಶ್ಯಕತೆ ಕಂಡುಬಂದರೆ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ ಎಂದು ಶ್ರೀರಾಮುಲು ಹೇಳಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್​ನ ರಮೇಶ್​ಕುಮಾರ್​, ರಸ್ತೆಗಳ ರಾಷ್ಟ್ರೀಕರಣದ ನಂತರ ಉಂಟಾಗಿರುವ ಗೊಂದಲದಿಂದಾಗಿ ಅಪಘಾತಗಳು ಪದೇಪದೆ ಮರುಕಳಿಸುತ್ತಿವೆ. ಸರ್ಕಾರ ಇನ್ನಾದರೂ ಸೂಕ್ತ ಮಾಗೋರ್ಪಾಯ ಕಂಡು ಹಿಡಿಯದಿದ್ದರೆ ಖಜಾನೆಯಲ್ಲಿರುವ ಹಣವೆಲ್ಲ ಪರಿಹಾರ ಕೊಟ್ಟೇ ಖಾಲಿಯಾಗುತ್ತದೆ. ಕಾನೂನು ಸಚಿವರ ಜತೆ ಚರ್ಚಿಸಿ ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂದು ಸಲಹೆ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಯು.ಟಿ. ಖಾದರ್​, ಪಾವಗಡದಲ್ಲಿ ಸಂಭವಿಸಿದ ಅಪಘಾತ ಹಾಗೂ ಆರು ಜನ ಮೃತಪಟ್ಟ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಂತಹ ಘಟನೆಗಳು ಮರುಕಳಿಸದಂತಹ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ರಾಷ್ಟ್ರೀಕೃತ ಮಾರ್ಗಗಳಲ್ಲಿ ಖಾಸಗಿ ಬಸ್​ ಓಡಾಡುವುದಿಲ್ಲ. ಸರ್ಕಾರಿ ಬಸ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದಿಲ್ಲ. ಅನುಮತಿ ಇರುವ ಕೆಲವೇ ಕೆಲವು ಬಸ್​ಗಳಲ್ಲಿ ಹೀಗೆ ಮಿತಿಮೀರಿ ತುಂಬುತ್ತಾರೆ. ಟಾಪ್​ ಮೇಲೆ ಪ್ರಯಾಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ರಮೇಶಕುಮಾರ್​ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್​ನ ಡಿ.ಸಿ. ತಮ್ಮಣ್ಣ, ವ್ಹೀಲ್​ ಅಲೈನ್​ಮೆಂಟ್​ ಮಾಡದೆ ಇರುವುದರಿಂದಲೂ ಅಪಘಾತಗಳು ಸಂಭವಿಸುತ್ತಿವೆ. 50 ವ್ಹೀಲ್​ ಅಲೈನ್​ಮೆಂಟ್​ ಘಟಕಗಳನ್ನು ಸಾರಿಗೆ ಇಲಾಖೆ ಆರಂಭಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net