ಮದ್ವೆಗೂ ಮುನ್ನ ನೀನೇ ನನ್ನ ಚಿನ್ನಾ ಅಂತಿದ್ದ... ಆಮೇಲೆ ಶುರುವಾಯ್ತು ಅವನ ವರಸೆ... ಆಕೆಯ ಕಷ್ಟ ಹೇಳತೀರದು

wedding
Published on

ಶಿವಮೊಗ್ಗ: ಅಜ್ಜಿ ಮನೆಗೆ ಬಂದಾಗ ಅವಳ ಪರಿಚಯ ಆಯ್ತು, ಸ್ನೇಹ ಬೆಳೆಸಿದ, ಅವಳ ಹೃದಯಕ್ಕೆ ಹತ್ತಿರವಾದ. ನಂತರ ನೀನೇ ನನ್ನ ಬಾಳ ಬಂಗಾರ ಎಂದು ದಾವಣಗೆರೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಅವಳ ಕೈ ಹಿಡಿದ. ಸ್ವಲ್ಪ ದಿನ ಬಿಟ್ಟು ನಿನ್ನನ್ನು ಬೆಂಗಳೂರಿನ ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೋದ. ಆದರೀಗ ವರಸೆ ಬದಲಿಸಿದ್ದಾನೆ... ಗಂಡನ ಕಾಟ ಸಹಿಸಲಾಗದೆ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಏನಿದು ಪ್ರಕರಣ? ದಾವಣಗೆರೆ ತಾಲೂಕು ಕಾರಿಗನೂರು ಗ್ರಾಮದ ಚೇತನ್ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದು, ಭದ್ರಾವತಿ ತಾಲೂಕಿನ ಸೀತಾರಾಮಪುರಕ್ಕೆ ಅಜ್ಜಿ ಮನೆಗೆ ಬಂದಾಗ ಅಂಜು ಪರಿಚಯ ಆಗಿತ್ತು. ಸಿನಿಮಾ ಕತೆಯಂತೆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿತ್ತು. 2020ರಲ್ಲಿ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲೇ ಸಪ್ತಪದಿ ತುಳಿದು ನೋಂದಣಿ ಮಾಡಿಸಿಕೊಂಡಿದ್ದರು. ಈ ವಿಷಯವನ್ನು ಚೇತನ್ ತನ್ನ ಪಾಲಕರಿಂದ ಮುಚ್ಚಿಟ್ಟಿದ್ದ.

ಲವ್ ಮಾಡಿ ಗುಟ್ಟಾಗಿ ಮದುವೆಯಾದ ಚೇತನ್, ಬೆಂಗಳೂರಿಗೆ ಹೋಗಿ ಸ್ವಲ್ಪ ದಿನದ ಬಳಿಕ ಕರೆಸಿಕೊಳ್ಳುವುದಾಗಿ ಹೇಳಿದ್ದ. ಬೆಣ್ಣೆಯಂತ ಚೇತನ್ ಮಾತಿಗೆ ಅಂಜು ಕರಗಿ ಹೋಗಿದ್ದಳು. ಇನ್ನೇನು ಸ್ವಲ್ಪ ದಿನಗಳಲ್ಲಿ ಬೆಂಗಳೂರಿಗೆ ತೆರಳಿ ಪ್ರೀತಿಸಿ ಕೈ ಹಿಡಿದ ಚೇತನ್‌ನೊಂದಿಗೆ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಚಾತಕಪಕ್ಷಿಯಂತೆ ಅಂಜು ಕಾಯುತ್ತಿದ್ದಳು. ಆದರೀಗ ತನ್ನೊಂದಿಗೆ ಕರೆದೊಯ್ಯಲು ಚಿನ್ನ ಬೇಕೇಂದು ಬೇಡಿಕೆ ಇಟ್ಟಿದ್ದಾನೆ!

ಪದೇಪದೆ ಫೋನ್ ಕರೆ: ಮದುವೆ ಮುಂಚೆ ನೀನೇ ನನ್ನ ಚಿನ್ನ ಎನ್ನುತ್ತಿದ್ದ ಚೇತನ್, ಈಗ ಅಂಜುಗೆ ಪದೇಪದೆ ಫೋನ್ ಮಾಡಿ ಚಿನ್ನ ಮತ್ತು ದುಡ್ಡು ತೆಗೆದುಕೊಂಡು ಬಾ ಎಂದು ಬೆದರಿಕೆ ಹಾಕುತ್ತಿದ್ದಾನಂತೆ. ಮಗ ಗುಟ್ಟಾಗಿ ಕೈ ಹಿಡಿದವಳನ್ನು ಅಧಿಕೃತವಾಗಿ ಸೊಸೆ ಎಂದು ಒಪ್ಪಿಕೊಳ್ಳಲು ಆತನ ಪಾಲಕರೂ 2 ಲಕ್ಷ ನಗದು, 100 ಗ್ರಾಂ ಬಂಗಾರ ಕೊಟ್ಟರೆ ಮಾತ್ರ ನಿಮ್ಮ ಮಗಳು ನಮ್ಮ ಮನೆಯ ಸೊಸೆಯಾಗಿ ಇರ್ತಾಳೆ ಎಂದು ಯುವತಿ ಪಾಲಕರಿಗೆ ತಾಕೀತು ಮಾಡಿದ್ದಾರೆ. ನನ್ನ ಬಾಳಿಗೆ ನೀನೇ ಬಂಗಾರ ಎಂದು ಕೈ ಹಿಡಿದವಳನ್ನು ಈಗ 100 ಗ್ರಾಂ ಬಂಗಾರ ಜತೆ ಬಂದ್ರಷ್ಟೇ ಮನೆಗೆ ಸೇರಿಸಿಕೊಳ್ಳೋದಾಗಿ ಸೂಚಿಸಿದ್ದಾರೆ. ನ್ಯಾಯಕ್ಕಾಗಿ ಅಂಜು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net