ತಿಮ್ಮಪ್ಪನ ಸನ್ನಿಧಿಯ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ ಬಾಲಕಿಯನ್ನು ಎಳೆದೊಯ್ದು ಕೊಂದು ತಿಂದ ಚಿರತೆ!

Leapord Attack
Published on

ತಿರುಪತಿ: ತಿರುಮಲದಲ್ಲಿ ತಿಮ್ಮಪ್ಪನ ದೇವಸ್ಥಾನಕ್ಕೆ ತೆರಳುವ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ ಚಿರತೆಯೊಂದು ಆರು ವರ್ಷದ ಬಾಲಕಿಯನ್ನು ಎಳೆದೊಯ್ದು ಕೊಂದು ತಿಂದಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.

ಮೃತ ಬಾಲಕಿಯನ್ನು ಲಕ್ಷಿತಾ ಎಂದು ಗುರುತಿಸಲಾಗಿದೆ. ಈಕೆ ನೆಲ್ಲರೂ ಜಿಲ್ಲೆಯ ಕೊವ್ವೂರು ಮಂಡಲದ ಪೊಥಿರೆಡ್ಡಿಪಾಳಂ ಗ್ರಾಮದ ನಿವಾಸಿ. ಕುಟುಂಬದೊಂದಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗುವಾಗ ಈ ದುರಂತ ಸಂಭವಿಸಿದೆ. ತಿರುಮಲಕ್ಕೆ ಹೋಗುವ ಮೆಟ್ಟಿಲು ಮಾರ್ಗದಲ್ಲಿ ಚಿರತೆ ದಾಳಿಗೆ ಸಾವು ಸಂಭವಿಸಿದ ಮೊದಲ ಪ್ರಕರಣ ಇದಾಗಿದೆ.

ಹೊಂಚು ಹಾಕಿ ಬಾಲಕಿ ಮೇಲೆ ದಾಳಿ 

ಮೃತ ಬಾಲಕಿ ತನ್ನ ಪಾಲಕರಾದ ದಿನೇಶ್​ ಕುಮಾರ್​, ಶಶಿಕಲಾ ಜತೆ ಶುಕ್ರವಾರ ಸಂಜೆ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ ದೇವಸ್ಥಾನಕ್ಕೆ ಹೊರಟಿದ್ದಳು. ರಾತ್ರಿ 7.30ರಿಂದ 8 ಗಂಟೆಯ ಸಮಯದಲ್ಲಿ ಲಕ್ಷಿತಾ ಕುಟಂಬ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ಕೇಂದ್ರದ ಬಳಿಯಿರುವ ಬೆಟ್ಟದ ಬಳಿ ಬಂದಾಗ ಚಿರತೆಯೊಂದು ಹೊಂಚು ಹಾಕಿ, ಬಾಲಕಿ ಲಕ್ಷಿತಾ ಮೇಲೆ ದಾಳಿ ಮಾಡಿ, ಹತ್ತಿರದ ಅರಣ್ಯ ಒಳಗಡೆ ಎಳೆದುಕೊಂಡು ಹೋಯಿತು ಎಂದು ಟಿಟಿಡಿ ಮೂಲಗಳು ತಿಳಿಸಿವೆ.

ರಕ್ಷಣೆಗೆ ಅಡ್ಡಿಯಾದ ಕತ್ತಲು

ಪಾಲಕರು ಮತ್ತು ಸಹ ಪಾದಚಾರಿಗಳು ಹೆಣ್ಣು ಮಗುವನ್ನು ರಕ್ಷಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದಾದರೂ ತುಂಬಾ ಕತ್ತಲಾಗಿದ್ದರಿಂದ ಅವರ ಯಾವುದೇ ಪ್ರಯತ್ನ ಫಲ ನೀಡಲಿಲ್ಲ. ತಿರುಮಲ ತಿರುಪತಿ ದೇವಸ್ಥಾನದ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಂಗ್ ಅಧಿಕಾರಿಗಳು ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶನಿವಾರ ಮುಂಜಾನೆ ಅರಣ್ಯ ಪ್ರದೇಶದಲ್ಲಿ ಬಾಲಕಿಗಾಗಿ ಹುಡುಕಾಟ ನಡೆಸಿದಾಗ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

ಮೇಲ್ಭಾಗ ಸಂಪೂರ್ಣ ನಾಶ

ಬಾಲಕಿಯ ದೇಹದ ಮೇಲ್ಭಾಗವನ್ನು ಚಿರತೆ ಸಂಪೂರ್ಣ ತಿಂದು ಹಾಕಿದೆ. ಉಳಿದ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪತಿಯ ಎಸ್​ವಿಆರ್​ಆರ್​ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ಈ ಘಟನೆ ತಿರುಮಲ ಸನ್ನಿಧಿಗೆ ನಡೆದುಕೊಂಡು ಹೋಗುವ ಭಕ್ತರಲ್ಲಿ ಭಯವನ್ನು ಉಂಟು ಮಾಡಿದೆ.

ಜೂನ್​ನಲ್ಲಿಯೂ ನಡೆದಿತ್ತು ದಾಳಿ

ಇದೇ ವರ್ಷದ ಜೂನ್​ 22ರಲ್ಲಿ ಇದೇ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ 5 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ಆದರೆ, ಬಾಲಕ ಚಿರತೆಯ ದವಡೆಗಳಿಂದ ಪವಾಡವೆಂಬಂತೆ ಪಾರಾಗಿದ್ದ. ಈ ಘಟನೆ ನಡೆದ ಮಾರನೇ ದಿನವೇ ಚಿರತೆಯನ್ನು ಸೆರೆಹಿಡಿದು ತಿರುಮಲದಿಂದ ಬಹುದೂರ ಇರುವ ಅರಣ್ಯಕ್ಕೆ ಬಿಡಲಾಗಿತ್ತು. ಚಿರತೆ ಕಾಟ ಕೊನೆಗೂ ಅಂತ್ಯಗೊಂಡಿದೆ ಎಂದು ಎಲ್ಲರೂ ಭಾವಿಸಿದ್ದರು. ಈ ಘಟನೆ ನಡೆದ ಒಂದೂವರೆ ತಿಂಗಳ ಬಳಿಕ ಇದೀಗ ಮತ್ತೊಂದು ಘಟನೆ ನಡೆದಿದ್ದು, ಇದೀಗ ಬಾಲಕಿ ಚಿರತೆ ದಾಳಿಗೆ ಬಲಿಯಾಗಿದ್ದಾಳೆ. ಇದರಿಂದ ತಿರುಮಲಕ್ಕೆ ಚಾರಣ ಮಾಡುವ ಭಕ್ತರನ್ನು ಮತ್ತೆ ಆತಂಕಕ್ಕೆ ದೂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net