

ಬೆಂಗಳೂರು: ಚಂದ್ರನ ಶಿಕಾರಿಗೆ ಹೊರಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಗಗನನೌಕೆ ಚಂದ್ರಯಾನ-3 ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ-3 ಚಂದ್ರನಿಂದ ಕೇವಲ 1437 ಕಿ.ಮೀ. ದೂರದಲ್ಲಿದೆ. ಇನ್ನೊಂದು ವಾರದಲ್ಲಿ ಇದು 100 ಕಿ.ಮೀ. ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ.
ಆಗಸ್ಟ್ 1ರಂದು ಭೂಕಕ್ಷೆಯನ್ನು ತೊರೆದ ಚಂದ್ರಯಾನ ನೌಕೆ, ಆಗಸ್ಟ್ 5ರಂದು ಚಂದ್ರನ ಕಕ್ಷೆಗೆ ಪ್ರವೇಶ ಪಡೆಯಿತು. ಅಂದಿನಿಂದ ಇಸ್ರೋ ಆರ್ಬಿಟ್ ರಿಡಕ್ಷನ್ ಮಾನ್ಯುವರ್ಸ್ ಮಾಡುತ್ತಿದ್ದು, ನೌಕೆಯ ಅಂತರವನ್ನು ಕಡಿತಗೊಳಿಸುತ್ತಿದೆ. ಇತ್ತೀಚೆಗಷ್ಟೇ ಮತ್ತೊಂದು ಹಂತದ ರಿಡಕ್ಷನ್ ಮಾನ್ಯುವರ್ಸ್ ಅನ್ನು ಯಶಸ್ವಿಯಾಗಿ ಮುಗಿಸಿದೆ. ಆಗಸ್ಟ್ 14 ಮತ್ತು 15ಕ್ಕೆ ಈ ಪ್ರಕ್ರಿಯೆಯು ಇನ್ನೂ ಎರಡು ಬಾರಿ ಪೂರ್ಣಗೊಳ್ಳಲಿದೆ.
ಈವರೆಗೂ ಯೋಜನೆಯಂತೆಯೇ ಚಂದ್ರಯಾನ-3 ನೌಕೆ ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಆದರೆ ಈ ಮಿಷನ್ ಪೂರ್ಣಗೊಳ್ಳಬೇಕಾದರೆ, ಚಂದ್ರನ ಮೇಲೆ ಮೃದುವಾಗಿ ಲ್ಯಾಂಡ್ ಆಗಬೇಕಿರುವುದು ತುಂಬಾ ಮುಖ್ಯ. ಈ ತಿಂಗಳ 23ರಂದು ಸಾಫ್ಟ್ ಲ್ಯಾಂಡಿಂಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-2 ಮಿಷನ್ ಲ್ಯಾಂಡಿಂಗ್ ವೇಳೆಯೇ ವಿಫಲವಾಗಿತು. ಲ್ಯಾಂಡರ್ ಇನ್ನೇನು ಚಂದ್ರನ ಮೇಲೆ ಇಳಿಯಬೇಕು ಅನ್ನುವಷ್ಟರಲ್ಲಿ ಪತನಗೊಂಡು ಸಂಪರ್ಕ ಕಡಿದುಕೊಂಡಿತು. ಇದರಿಂದ ಚಂದ್ರಯಾನ-2 ಯೋಜನೆ ವಿಫಲವಾಯಿತು. ಇದರಿಂದ ಪಾಠ ಕಲಿತಿರುವ ಇಸ್ರೋ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಾರಿ ಯಾವುದೇ ತೊಂದರೆ ಇರುವುದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದೆ.
ನಿರ್ಣಾಯಕ ಹಂತದಲ್ಲೂ ನೌಕೆಯ ಸೆನ್ಸಾರ್ ಮತ್ತು ಇಂಜಿನ್ ವಿಫಲವಾದರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಲ್ಯಾಂಡಿಂಗ್ ಯಶಸ್ವಿಯಾಗುವ ರೀತಿಯಲ್ಲಿ ಹೊಸ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಒಂದು ವೇಳೆ ಚಂದ್ರನ ಮೇಲೆ ಭಾರತ ಸಾಫ್ಟ್ ಲ್ಯಾಂಡ್ ಮಾಡಿದ್ದಲ್ಲಿ, ಅಮೆರಿಕ, ಚೀನಾ, ರಷ್ಯಾ ಮತ್ತು ಫ್ರಾನ್ಸ್ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ.
ಅಂದಹಾಗೆ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. (ಏಜೆನ್ಸೀಸ್)