

ಮುಂಬೈ: ಹೌದು! 6000 ಕೆಜಿ ತೂಕದ ಕಬ್ಬಿಣದ ಸೇತುವೆಯನ್ನು ಕಳವು ಮಾಡಲಾಗಿದೆ. ಸೇತುವೆಯು ಸುಮಾರು 90 ಅಡಿ ಉದ್ದವಿದ್ದು ಇದನ್ನು ಮುಂಬೈನ ಮಲಾಡ್ ಪ್ರದೇಶದಲ್ಲಿ ಸಣ್ಣ ತೊರೆಯನ್ನು ದಾಟಲು ಬಳಸಲಾಗುತ್ತಿತ್ತು. 2 ಲಕ್ಷ ಮೌಲ್ಯದ ಸೇತುವೆ ನಾಪತ್ತೆಯಾಗಿರುವುದನ್ನು ಸ್ಥಳೀಯರು ಗಮನಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರ ಗುಂಪೊಂದು ಕಬ್ಬಿಣದ ಸೇತುವೆಯನ್ನು ಕೆಡವಿ ಟ್ರಕ್‌ಗಳಲ್ಲಿ ಸಾಗಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆಯ ಬೃಹತ್ ವಿದ್ಯುತ್ ಕೇಬಲ್‌ಗಳನ್ನು ಸಾಗಿಸಲು ಕಳೆದ ವರ್ಷ ಜೂನ್‌ನಲ್ಲಿ ಕಬ್ಬಿಣದ ಬ್ರಿಡ್ಜ್ಅನ್ನು ಚರಂಡಿಯ ಮೇಲೆ ಇರಿಸಲಾಗಿತ್ತು. ಆದರೆ, ಈ ವರ್ಷ ಏಪ್ರಿಲ್‌ನಲ್ಲಿ ಶಾಶ್ವತ ಸೇತುವೆ ಬಂದ ನಂತರ ಅದನ್ನು ಸ್ಥಳಾಂತರಿಸಲಾಯಿತು. ಸೇತುವೆ ನಾಪತ್ತೆಯಾಗಿರುವುದನ್ನು ಕಂಡು ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆ, ಜೂನ್ 26ರಂದು ಪೊಲೀಸರಿಗೆ ದೂರು ನೀಡಿತ್ತು.
ಈ ಸೇತುವೆಯು ಚೆನ್ನಾಗಿ ಬೆಳಕಿರುವ ಜನನಿಬಿಡ ಪ್ರದೇಶದಲ್ಲಿದ್ದ ಕಾರಣ ಈ ಘಟನೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಆ ಪ್ರದೇಶದಲ್ಲಿ ಯಾರ ಗಮನಕ್ಕೂ ಬಾರದೆ ಕಳ್ಳರು ಅದನ್ನು ಹೇಗೆ ಕದಿಯಲು ಸಾಧ್ಯವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಗ್ಯಾಸ್ ಕಟರ್ ಯಂತ್ರಗಳೊಂದಿಗೆ ಸೇತುವೆಯತ್ತ ಸಾಗುತ್ತಿದ್ದ ಭಾರೀ ವಾಹನವನ್ನು ಗುರುತಿಸಿದ್ದಾರೆ.
ಕಳ್ಳತನಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಒಬ್ಬ ವ್ಯಕ್ತಿ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ವರದಿಯಾಗಿದೆ. ಉಳಿದ ಮೂವರು ಆತನ ಸಹಚರರು ಎನ್ನಲಾಗಿದೆ. ಅವರೆಲ್ಲರ ಮೇಲೆ ಕಳ್ಳತನ ಮತ್ತು ಕ್ರಿಮಿನಲ್ ಅತಿಕ್ರಮದ ಆರೋಪ ಹೊರಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇನ್ಯಾರಾದರೂ ಶಂಕಿತರು ಭಾಗಿಯಾಗಿದ್ದಾರೆಯೇ ಎಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)