ಈ ದೇಶಗಳ ನಡುವೆ ಗಡಿ ಇರಬಾರದು; ಅಖಂಡ ಭಾರತದ ಪ್ರಸ್ತಾಪ ಮಾಡಿದ್ರಾ ಶ್ರೀಲಂಕಾ ಅಧ್ಯಕ್ಷ?

ranil wikramasinghe
Published on

ಕೊಲಂಬೋ: ಇದೀಗ ಶ್ರೀಲಂಕಾ ಪ್ರಧಾನಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್. ನೇಪಾಳ ಮುಂತಾದ ಭಾರತ ಸೇರಿದಂತೆ ಏಳು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ BIMSTEC ಪ್ರದೇಶವನ್ನು ಗಡಿ ರಹಿತ ಪ್ರದೇಶ ಮಾಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ದೇಶಗಳ ನಡುವೆ ಪ್ರವಾಸೋದ್ಯಮ ಸೇರಿದಂತೆ ಇತರ ಉದ್ಯಮಗಳನ್ನು ಅಭಿವೃದ್ಧಿ ಮಾಡಬಹುದು ಎಂದಿದ್ದಾರೆ.

ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಫೆ, ಗುರುವಾರ ಐತಿಹಾಸಿಕ ಬಂಡಾರನಾಯಕೆ ಮೆಮೋರಿಯಲ್‌ ಇಂಟರ್‌ನ್ಯಾಶನಲ್ ಕಾನ್ಸರೆನ್ಸ್ ಹಾಲ್‌ನಲ್ಲಿ (ಬಿಐಎಂಸಿಎಚ್) ನಡೆದ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಟಿಎಐಎಐ) 67ನೇ ವಾರ್ಷಿಕ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಈ ವರ್ಷದ TAAI ಸಮಾವೇಶದ ವಿಷಯವು 'ಗಡಿಗಳನ್ನು ದಾಟಿ ಜೀವನವನ್ನು ಪರಿವರ್ತಿಸುವುದು' ಎಂದಾಗಿತ್ತು.

ಏನಿದು BIMSTEC?

ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬೇ ಆಫ್​ ಬೆಂಗಾಲ್​ ಇನಿಶಿಯೇಟಿವ್ ಅಥವಾ BIMSTEC, ಭಾರತ ಸೇರಿದಂತೆ ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್, ಥೈಲ್ಯಾಂಡ್, ನೇಪಾಳ ಮತ್ತು ಭೂತಾನ್ ಅನ್ನು ಒಳಗೊಂಡಿರುವ ಒಂದು ಪ್ರಾದೇಶಿಕ ಗುಂಪು.

ಶ್ರೀಲಂಕಾದ ಆರ್ಥಿಕತೆ ಉತ್ತೇಜಿಸಲು ಈ ಪ್ಲಾನ್...

ತಮ್ಮ ಭಾಷಣದಲ್ಲಿ, ಅಧ್ಯಕ್ಷ ವಿಕ್ರಮಸಿಂತೆ ಅವರು ಕಳೆದ ವರ್ಷ ಆರ್ಥಿಕ ಬಿಕ್ಕಟ್ಟಿನ ನಂತರ ನಗದು ಕೊರತೆಯ ದ್ವೀಪ ರಾಷ್ಟ್ರವು ಮಾಡುತ್ತಿರುವ ಚೇತರಿಕೆಯ ಬಗ್ಗೆ ಮಾತನಾಡಿದರು.

“ನಾವು ಪ್ರವಾಸೋದ್ಯಮವನ್ನು ನವೀಕರಿಸಿ ಇರುವ ಸಾಮರ್ಥ್ಯವನ್ನು ಹೆಚ್ಚು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಾವು ಶ್ರೀಲಂಕಾದಲ್ಲಿ ದಿವಾಳಿತನವನ್ನು ಎದುರಿಸಿದ್ದೇವೆ. ಈಗ ನಾವು ಅದರಿಂದ ಹೊರಬರುತ್ತಿದ್ದು, ಸಾಲ ಪುನರಚನೆ ಪ್ರಕ್ರಿಯೆಯು ನಡೆಯುತ್ತಿದೆ. ವ್ಯಾಪಾರದ ಸಮತೋಲನವು ನಮ್ಮ ಪರವಾಗಿಲ್ಲ ಎಂಬುದನ್ನು ನಾವು ಇನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ, ಮುಂಬರುವ ದಿನಗಳಲ್ಲಿ ವ್ಯಾಪಾರದ ಸಕಾರಾತ್ಮಕ ಸಮತೋಲನವನ್ನು ನಾವು ಖಚಿತಪಡಿಸಿಕೊಳ್ಳಬೇಕು, "ಎಂದು ಅವರು ಹೇಳಿದರು. ಮತ್ತು ಸಾಲ-ಸೃಷ್ಟಿ ಮಾಡದ ನಿಧಿಯನ್ನು ಸಂಗ್ರಹಿಸುವ ಒಂದು ಮಾರ್ಗವೆಂದರೆ ಪ್ರವಾಸೋದ್ಯಮ. ಹಾಗಾಗಿ ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಿ ಎಂದರು.

ಅವರ ಈ ಯೋಜನೆಯಲ್ಲಿ BIMSTEC ಪ್ರದೇಶದ ದೇಶಗಳ ನಡುವೆ ವೀಸಾ ರಹಿತ ಪ್ರಯಾಣಕ್ಕಾಗಿ ಅವಕಾಶ ನಿರ್ಮಿಸಬೇಕು. ಈ ಮೂಲಕ ಅಂತರಾಷ್ಟ್ರೀಯ ಪ್ರವಾಸಿಗರನ್ನು ಸುಲಭವಾಗಿ ಆಕರ್ಷಿಸಬಹುದಾಗಿದ್ದು, ಸ್ಥಳೀಯ ಉದ್ಯಮಿಗಳಿಗೂ ಉತ್ತೇಜನ ಸಿಗಲಿದೆ. ಈ ಯೋಜನೆ ಅಸ್ತಿತ್ವಕ್ಕೆ ಬಂದಲ್ಲಿ ಪ್ರವಾಸೋದ್ಯಮ ನಡೆಸುವ ಕಂಪನಿಗಳಿಗೂ ಉತ್ತೇಜನ ಸಿಗಲಿದೆ.

ಇದು ಅಖಂಡ ಭಾರತದ ಪ್ಲಾನ್ ಅಲ್ಲ...

ಇತ್ತೀಚೆಗೆ ಭಾರತದ ಹೊಸ ಸಂಸತ್ ಭವನ ಲೋಕಾರ್ಪಣೆಗೊಳ್ಳುವ ವೇಳೆ ಮೌರ್ಯ ಸಾಮ್ರಾಜ್ಯದ ಭೂಪಟವನ್ನು ಪಾಕಿಸ್ತಾನ ಹಾಗೂ ನೇಪಾಳ 'ಅಖಂಡ ಭಾರತ' ಎಂದು ಕರೆದು ವಿವಾದ ಸೃಷ್ಟಿಸಿದ್ದವು. ಆ ದೇಶಗಳ ಕೆಲ ಚಿಂತಕರಂತೂ ಭಾರತ ಗಡಿ ವಿಸ್ತರಣೆ ಮಾಡುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಹೇಳಿದ್ದರು. ಆದರೆ ವಿದೇಶಾಂಗ ಸಚಿವರು ಈ ಕುರಿತಾಗಿ ಸ್ಪಷ್ಟನೆ ನೀಡಿದ್ದ ನಂತರ ವಿವಾದ ತಣ್ಣಗಾಗಿತ್ತು.

ಇದೀಗ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಗಡಿ ರಹಿತ ಪ್ರದೇಶದ ನಿರ್ಮಾಣದ ಬಗ್ಗೆ ಮಾತನಾಡಿದಾಗ ಅದಕ್ಕೂ ಅಖಂಡ ಭಾರತಕ್ಕೂ ಸಾಮ್ಯತೆ ಇರುವುದನ್ನು ನೋಡಬಹುದು. ತಮ್ಮ ಭಾಷಣದ ಸಂದರ್ಭದಲ್ಲಿ ಶ್ರೀಲಂಕಾ ಅಧ್ಯಕ್ಷ, ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಗಳ ಮುಂತಾದ BIMSTEC ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳಿಗೂ ಒತ್ತು ನೀಡಿ ಮಾತನಾಡಿದ್ದರು.

ಆದರೆ ಅವರು ಅಖಂಡ ಭಾರತದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಈ ಯೋಜನೆಯ ಮೂಲ ಉದ್ದೇಶವೇ ಪ್ರವಾಸೋದ್ಯಮವನ್ನು ಬೆಳೆಸುವುದಾಗಿದೆ. ಈ ಮೂಲಕ ಬಂಗಾಳಕೊಲ್ಲಿಯನ್ನು ಉದ್ಯಮದ ಜತೆಗೆ ಪ್ರವಾಸೋದ್ಯಕ್ಕೂ ಬಳಸಲು ಅವರು ಉದ್ದೇಶಿಸಿದ್ದಾರೆ. ಇದು ಇನ್ನೂ ಕಲ್ಪನೆಯಾಗಿಯೇ ಇದ್ದು ಈ ಯೋಜನೆ ಸಾಕಾರಗೊಳ್ಳಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net