ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯವರ ವಿಶ್ವಾಸ ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಲೇವಡಿಯಾಡಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಶಿ ತರೂರ್, ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಕಳೆದ ಬಾರಿಗಿಂತಲೂ ಹೀನಾಯವಾಗಿ ಸೋಲಲಿದೆ. ದೇಶದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಪೂರಕವಾದ ವಾತಾವರಣವಿದ್ದು ನಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಅಧಿಕ ಸ್ಥಾನ ಗೆಲ್ಲುವುದೇ ದೊಡ್ಡ ಸವಾಲಾಗಿದೆ. ಹೀಗಿರುವಾದ ಅವರು 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಈಗಾಗಲೇ 190 ಕ್ಷೇತ್ರಗಳಲ್ಲಿ ಮತದಾನವಾಗಿದ್ದು, ಮೂಲಗಳ ಪ್ರಕಾರ ಫಲಿತಾಂಶ ನಮಗೆ ಅನುಕೂಲಕರವಾಗಿರಲಿದೆ. ಹಾಗೆಂದ ಮಾತ್ರಕ್ಕೆ, ನಮಗೆ ಅದ್ಭುತ ಜಯ ಸಿಗಲಿದೆ ಎಂದು ಹೇಳುವುದಿಲ್ಲ. ಆದರೆ, ಹಾಲಿ ಸರ್ಕಾರಕ್ಕೂ ಅದು ಸುಲಭವಲ್ಲ ಎಂಬುದಾಗಿ ಹೇಳಿದ್ದಾರೆ.
Am off on the campaign trail! First stop Goa, where an interesting programme awaits me over the next two days. Next: Ahmedabad. Several more states to follow. (Pix are outtakes from my @PTI_News interview yesterday). pic.twitter.com/RxYM0mVVMs
— Shashi Tharoor (@ShashiTharoor) May 2, 2024
ಇದನ್ನೂ ಓದಿ: ಟಿ-20 ವಿಶ್ವಕಪ್ನಲ್ಲಿ ಈ ನಾಲ್ಕು ತಂಡಗಳು ಸೆಮಿಫೈನಲ್ಗೇರುವುದು ಖಚಿತ: ಯುವರಾಜ್ ಸಿಂಗ್
2014 ಹಾಗೂ 2019ರ ಲೋಕಸಭೆ ಚುನಾವಣೆಗಳನ್ನು ಗಮನಿಸಿದಾಗ ಮತದಾರರಲ್ಲಿ ಬಿಜೆಪಿ ಬಗ್ಗೆ ಮುಂಚೆ ಇದ್ದ ಉತ್ಸಾಹ ಈಗಿಲ್ಲ. ಇದನ್ನು ನೋಡಿದಾಗ ನಾವು ಈ ಬಾರಿಯ ಚುನಾವಣೆಯಲ್ಲಿ ನಾವು ನಿರೀಕ್ಷೆಗೂ ಮೀರಿ ಗೆಲ್ಲುತ್ತೇವೆ. ಜತೆಗೆ, ಹಿಂದಿ ಭಾಷಿಕ ಪ್ರದೇಶಗಳಲ್ಲೂ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಈ ಬಾರಿ ಬಿಜೆಪಿಗಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇನ್ನೂ 353 ಕ್ಷೇತ್ರಗಳಿಗೆ ಮತದಾನ ನಡೆಯಬೇಕಿದೆ. ನಾವು ಮತ್ತು ಇಂಡಿಯಾ ಒಕ್ಕೂಟದ ಇತರ ಪಕ್ಷಗಳು ಹೇಗೆ ಕೆಲಸ ಮಾಡಲಿವೆ ಎಂಬುದರ ಆಧಾರದಲ್ಲಿ ಇದು ನಿರ್ಧಾರವಾಗಲಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಧಾನಿ ಹಾದಿಯಾಗಿ ಬಿಜೆಪಿ ನಾಯಕರು ಅಭಿವೃದ್ಧಿಯ ಬದಲು ಧರ್ಮದ ಆಧಾರದಲ್ಲಿ ಮತಯಾಚಿಸುತ್ತಿದ್ದಾರೆ.
ನನ್ನ ಪ್ರಕಾರ ಬಿಜೆಪಿಯವರ ಈ ತಂತ್ರ ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ ಮತ್ತು ತಟಸ್ಥ ಮತದಾರರು ಇವರ ಇಂಥ ತಂತ್ರಕ್ಕೆ ಮಣಿಯುವುದಿಲ್ಲ. ಚುನಾವಣೆ ಘೋಷಣೆಯಾದ ಮೇಲೆ ಮಾರ್ಚ್ 16ರಿಂದ ನೀತಿ ಸಂಹಿತೆ ಜಾರಿ ಮಾಡಿದ್ದು ಯಾವ ಕಾರಣಕ್ಕಾಗಿ. ಜೂನ್ 4 ಮತ ಎಣಿಕೆ ದಿನವಾಗಿದ್ದು, ಇದೂ ಕೂಡಾ ಅಸಂಬದ್ಧವಾಗಿದೆ. ಒಂದೊಮ್ಮೆ ದೇಶದಲ್ಲಿ ಚುನಾವಣಾ ಹಿಂಸಾಚಾರ ನಡೆಯುವ ಭೀತಿ ಇದ್ದಲ್ಲಿ, ಅದನ್ನು ತಡೆಗಟ್ಟಲು ಚುನಾವಣಾ ಆಯೋಗವು ಅನ್ಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದಾಗಿತ್ತು. ಕಡಿಮೆ ಅವಧಿಯಲ್ಲಿ ನಡೆಸಬಹುದಾದ ಚುನಾವಣೆಯನ್ನು ಅನಗತ್ಯವಾಗಿ ದೀರ್ಘಗೊಳಿಸುವ ಮೂಲಕ, ತಮ್ಮ ಒಂದು ದೇಶ ಒಂದು ಚುನಾವಣೆ ಅಜೆಂಡಾವನ್ನು ಗುಪ್ತವಾಗಿ ಜಾರಿಗೊಳಿಸುವ ಉದ್ದೇಶ ಇರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.