ದೇಶದ 31 ಮುಖ್ಯಮಂತ್ರಿಗಳ ಪೈಕಿ ಇಬ್ಬರೇ ಬಡ ಸಿಎಂ! ಚಂದ್ರಬಾಬು ಶ್ರೀಮಂತ: ವರದಿ | 31 CMs

ವಿಜಯವಾಣಿ (2)
Published on

Richest CM: ಭಾರತದ 31 ಮುಖ್ಯಮಂತ್ರಿಗಳ ಒಟ್ಟು ನಿವ್ವಳ ಆಸ್ತಿ ಮೌಲ್ಯವನ್ನು ಅಧಿಕೃತವಾಗಿ ಪ್ರಕಟಿಸಿರುವ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಆಯಾ ರಾಜ್ಯದ ಸಿಎಂಗಳ ಒಟ್ಟು ಸ್ವಯಂ ಗಳಿಸಿದ ಆಸ್ತಿ ವಿವರವನ್ನು ಜನಸಾಮಾನ್ಯರ ಮುಂದೆ ಬಹಿರಂಗಪಡಿಸಿದೆ. ಸದ್ಯ ಈ ಪಟ್ಟಿಯಲ್ಲಿ ಕೆಲವು ಸಿಎಂಗಳು ಗಳಿಸಿರುವ ಸ್ಥಾನಗಳು ಜನರನ್ನು ಭಾರೀ ಅಚ್ಚರಿಗೆ ದೂಡಿರುವುದರಲ್ಲಿ ಅನುಮಾನವೇ ಇಲ್ಲ.

15.38 ಲಕ್ಷ ರೂ. ಆಸ್ತಿ!

ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಪ್ರಕಟಿಸಿರುವ ಮಾಹಿತಿ ಪ್ರಕಾರ, "ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯವು 2023-2024ರ ಆರ್ಥಿಕ ವರ್ಷಕ್ಕೆ ಸರಿಸುಮಾರು 1,85,854 ರೂ. ಇದಕ್ಕೆ ಹೋಲಿಸಿದರೆ, ಒಬ್ಬ ಮುಖ್ಯಮಂತ್ರಿಯ ಸರಾಸರಿ ಸ್ವ-ಆದಾಯವು 13,64,310 ರೂ.ಗಳಾಗಿದ್ದು, ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು" ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) 31 ಮುಖ್ಯಮಂತ್ರಿಗಳು ತಮ್ಮ ಕೊನೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿರುವ ಅಫಿಡವಿಟ್‌ಗಳನ್ನು ವಿಶ್ಲೇಷಿಸಿವೆ. ಇದರ ಪ್ರಕಾರ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಭಾರತದ 31 ಮುಖ್ಯಮಂತ್ರಿಗಳ ಪೈಕಿ 15.38 ಲಕ್ಷ ರೂಪಾಯಿ ಮೌಲ್ಯದ ಒಟ್ಟು ಆಸ್ತಿಯೊಂದಿಗೆ ಅತ್ಯಂತ ಬಡ ಸಿಎಂ ಎಂಬ ಸ್ಥಾನವನ್ನು ಅಲಂಕರಿಸಿದ್ದಾರೆ.

ಬಡ ಸಿಎಂಗಳ ಪಟ್ಟಿಯಲ್ಲಿ ಮೂವರು

ಮಮತಾ ಬ್ಯಾನರ್ಜಿ ಹೊರತುಪಡಿಸಿದರೆ ಜಮ್ಮು-ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ 55.24 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ 1 ಕೋಟಿ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಸಿಎಂಗಳು ಎಂಬ ಪಟ್ಟಿಗೆ ಸೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. 1.18 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಕೇರಳದ ಪಿಣರಾಯಿ ವಿಜಯನ್ ಇವರಿಬ್ಬರ ನಂತರ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಶ್ರೀಮಂತ ಸಿಎಂಗಳು ಯಾರೆಲ್ಲಾ?

ಇನ್ನು ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿರುವ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರು ಒಟ್ಟು 931 ಕೋಟಿ ರೂ.ಗಳ ಆದಾಯ ಹೊಂದಿದ್ದಾರೆ. ಅವರ ನಂತರದಲ್ಲಿ ಅರುಣಾಚಲ ಪ್ರದೇಶದ ಪೆಮಾ ಖಂಡು 332 ಕೋಟಿ ರೂ. ಹೊಂದಿದ್ದಾರೆ. ಇವರಿಬ್ಬರ ನಂತರ ಮೂರನೇ ಸ್ಥಾನವನ್ನು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅಲಂಕರಿಸಿದ್ದು, ಒಟ್ಟು 51 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net