ಅವಳಿ ಐಸಿಸಿ ಪ್ರಶಸ್ತಿಗೆ ಬುಮ್ರಾ ನಾಮನಿರ್ದೇಶನ: ರೇಸ್‌ನಲ್ಲಿ ಹೆಡ್, ರೂಟ್, ಬ್ರೂಕ್

New Project
Published on

ದುಬೈ: ಭಾರತದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ 2024ನೇ ಸಾಲಿನ ಐಸಿಸಿ ವರ್ಷದ ಕ್ರಿಕೆಟಿಗ (ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್‌ ಟ್ರೋಫಿ) ಹಾಗೂ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. ಐಸಿಸಿ ಸೋಮವಾರ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ್ದು, ಇಂಗ್ಲೆಂಡ್ ಬ್ಯಾಟರ್‌ಗಳಾದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಈ ಎರಡು ಪ್ರಶಸ್ತಿಗಳ ರೇಸ್‌ನಲ್ಲಿರುವ ಮತ್ತಿಬ್ಬರು ಆಟಗಾರರಾಗಿದ್ದಾರೆ. ಆಸೀಸ್‌ನ ಟ್ರಾವಿಸ್ ಹೆಡ್ (ವರ್ಷದ ಕ್ರಿಕೆಟಿಗ) ಮತ್ತು ಶ್ರೀಲಂಕಾದ ಕಮಿಂದು ಮೆಂಡಿಸ್ (ವರ್ಷದ ಟೆಸ್ಟ್ ಆಟಗಾರ) ಸಹ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.

17 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 31 ವರ್ಷದ ಬುಮ್ರಾ, ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿರುವ ಮೊದಲ ಭಾರತೀಯ ವೇಗಿ ಎನಿಸಿದ್ದಾರೆ. ಬುಮ್ರಾ ಹಾಲಿ ವರ್ಷ ಆಡಿರುವ 13 ಟೆಸ್ಟ್‌ಗಳಲ್ಲಿ 14.92ರ ಸರಾಸರಿಯಲ್ಲಿ ಒಟ್ಟು 71 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 30 ವಿಕೆಟ್‌ಗಳು ಪ್ರಸ್ತುತ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 4 ಪಂದ್ಯಗಳಲ್ಲಿ ಸಂಪಾದಿಸಿದ್ದಾರೆ. ತವರು ಹಾಗೂ ವಿದೇಶಿ ನೆಲದಲ್ಲಿ ಉತ್ತಮ ನಿರ್ವಹಣೆ ಸಾಧಿಸಿರುವ ಬುಮ್ರಾ, ಪ್ರಸ್ತುತ ಐಸಿಸಿ ಟೆಸ್ಟ್ ಬೌಲರ್‌ಗಳ ರ‌್ಯಾಂಕಿಂಗ್‌ನಲ್ಲಿ ಆಗ್ರಸ್ಥಾನದಲ್ಲಿದ್ದಾರೆ. ಜತೆಗೆ 8 ಟಿ20ಯಲ್ಲಿ 15 ವಿಕೆಟ್ ಕಬಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಹಾಲಿ ವರ್ಷ ರನ್‌ಹೊಳೆ ಹರಿಸಿರುವ ಜೋ ರೂಟ್, ವೃತ್ತಿಜೀವನದಲ್ಲಿ ಐದನೇ ಬಾರಿ ಕ್ಯಾಲೆಂಡರ್ ವರ್ಷದಲ್ಲಿ ಸಾವಿರಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಜತೆಗೆ ಟೆಸ್ಟ್‌ನಲ್ಲಿ 36 ಶತಕ ಸಿಡಿಸಿ ಕನ್ನಡಿಗ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿರುವ ರೂಟ್, ಹಾಲಿ ವರ್ಷ 17ಟೆಸ್ಟ್‌ನಲ್ಲಿ 1,556 ರನ್ ಕಲೆಹಾಕಿದ್ದಾರೆ. ಮತ್ತೋರ್ವ ಇಂಗ್ಲೆಂಡ್‌ನ ಬ್ಯಾಟರ್ 22 ವರ್ಷದ ಬ್ರೂಕ್ ಸಹ 2024ರಲ್ಲಿ ಆಡಿದ 12 ಟೆಸ್ಟ್‌ನಲ್ಲಿ ತ್ರಿಶತಕ ಸಹಿತ 1,100 ರನ್‌ಗಳಿಸಿದ್ದಾರೆ. ಆಸೀಸ್‌ನ ಟ್ರಾವಿಸ್ ಹೆಡ್ ಈ ಪ್ರಶಸ್ತಿಗೆ ನಾಮಾಂಕಿತಗೊಂಡಿರುವ 4ನೇ ಆಟಗಾರನಾಗಿದ್ದು, 9 ಟೆಸ್ಟ್‌ನಲ್ಲಿ 608 ರನ್‌ಗಳಿಸಿದರೆ, 15ಟಿ20 ಪಂದ್ಯಗಳಲ್ಲಿ 539 ರನ್‌ಗಳಿಸಿದ್ದಾರೆ. ಶ್ರೀಲಂಕಾದ ಕಮ್ಮಿಂದು ಮೆಂಡಿಸ್ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ರೇಸ್‌ನಲ್ಲಿರುವ 4ನೇ ಆಟಗಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net