

ಹೈದರಾಬಾದ್: ಬಿಸಿಲಿನ ಬೇಗೆಯನ್ನು ತಾಳಲಾರದೆ ಅಪಾರ್ಟ್ಮೆಂಟ್ನ ನೆಲಮಹಡಿಯಲ್ಲಿ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಕಾರು ಹರಿದು ಮೃತಪಟ್ಟಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಮೃತ ಬಾಲಕಿಯ ಹೆಸರು ಲಕ್ಷ್ಮೀ(3) ಎಂದು ತಿಳಿದು ಬಂದಿದ್ದು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೃತ ಬಾಲಕಿಯ ತಾಯಿ ಕಲಬುರ್ಗಿ ಮೂಲದ ಕವಿತಾ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಒಬ್ಬರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕವಿತಾ ದಂಪತಿ ಹಯತ್ನಗರದಲ್ಲಿ ಇರುವ ಲೆಕ್ಚರ್ಸ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಮಧ್ಯಾಹ್ನ 2:30ರ ಸುಮಾರಿಗೆ ಕವಿತಾ ಹಾಗೂ ಮಕ್ಕಳು ಊಟ ಮಾಡಿ ಕೆಲಸಕ್ಕೆ ವಾಪಸ್ ಆಗಿದ್ದರು. ಈ ವೇಳೆ ಮಗಳು ಲಕ್ಷ್ಮೀ ಬಿಸಿಲಿನ ಬೇಗೆ ತಾಳಲಾರದೆ ಅಲ್ಲೇ ಇದ್ದ ಬಾಲಾಜಿ ಆರ್ಕೇಡ್ ಎಂಬ ಅಪಾರ್ಟ್ಮೆಂಟ್ನ ನೆಲ ಮಹಡಿಯಲ್ಲಿ ಮಲಗಿದ್ದಾಳೆ.
ಮಧ್ಯಾಹ್ನ 3:00 ಘಂಟೆ ಸುಮಾರಿಗೆ ಲಕ್ಷ್ಮೀ ಮಲಗಿರುವುದನ್ನು ಗಮನಿಸದ ಕಾರು ಚಾಲಕ ಓರ್ವ ಆಕೆಯ ಮೇಲೆ ಕಾರನ್ನು ಹತ್ತಿಸಿದ್ದಾನೆ. ಕೂಡಲ್ಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕಾರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.