ಎರಡು ದಿನದಲ್ಲಿ ಮಹಾಮಾರಿ ಕರೊನಾಗೆ ಇಬ್ಬರು ಪೊಲೀಸ್​ ಅಧಿಕಾರಿಗಳು ಬಲಿ

Police
Published on

ನವದೆಹಲಿ: ಎರಡು ದಿನದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮಹಾಮಾರಿ ಕರೊನಾ ವೈರಸ್​ಗೆ ಬಲಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಪೊಲೀಸ್​ ಇಲಾಖೆ ಮೃತರಿಗೆ ತೀವ್ರ ಸಂತಾಪ ಸೂಚಿಸಿದೆ.

ಸಹಾಯಕ ಸಬ್​ ಇನ್ಸ್​ಪೆಕ್ಟರ್​ಗಳಾದ​ ವಿಕ್ರಮ್​ ಮತ್ತು ಶೇಶ್​ ಮಣಿ ಪಾಂಡೆ ಸಾವಿನಿಂದಾಗಿ ಪೊಲೀಸ್​ ಇಲಾಖೆಯಲ್ಲಿ ಈವರೆಗೂ ಒಟ್ಟು ಮೂವರು ಮೃತಪಟ್ಟಂತಾಗಿದೆ. ಮೂವರಿಗೂ ಪೊಲೀಸ್​ ಇಲಾಖೆಯ ಮುಖ್ಯಸ್ಥ ಎಸ್​.ಎಸ್​. ಶ್ರೀವಾತ್ಸವ್ ಅವರು ಟ್ವಿಟರ್​ನಲ್ಲಿ ಕಂಬನಿ ಮಿಡಿದಿದ್ದಾರೆ.

ಕರೊನಾ ವಿರುದ್ಧದ ಹೋರಾಟದಲ್ಲಿ ಅಸುನೀಗಿದ ಇಬ್ಬರು ದಿಟ್ಟ ಸಿಬ್ಬಂದಿಯ ಸಾವಿಗೆ ದೆಹಲಿ ಪೊಲೀಸ್​ ಕುಟುಂಬ ಸಂತಾಪ ಸೂಚಿಸುತ್ತದೆ. ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದಾದರೂ ಸಾಧ್ಯವಾಗಲಿಲ್ಲ. ಎಎಸ್​ಐ ವಿಕ್ರಮ್​ ಮತ್ತು ಶೇಶ್​ ಮಣಿ ಪಾಂಡೆ ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಶ್ರೀವಾತ್ಸವ್​ ಅವರು ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ದೆಹಲಿ ಪೊಲೀಸ್​ ಇಲಾಖೆಯ ಅಧಿಕೃತ ಟ್ವಿಟರ್​ ಖಾತೆಯಲ್ಲೂ ಸಂತಾಪ ಸೂಚಿಸಲಾಗಿದೆ.

ವಿಕ್ರಮ್​ ಅವರು ಉಸಿರಾಟ ತೊಂದರೆಯಿಂದಾಗಿ ಮೇ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11: 30ರ ಸುಮಾರಿಗೆ ಮೃತಪಟ್ಟಿದ್ದಾರೆ. ಶೇಶ್​ ಮಣಿ ಅವರಿಗೆ ಮೇ 26ರಂದು ಕರೊನಾ ಪಾಸಿಟಿವ್​ ಬಂದಿತ್ತು. ನಿನ್ನೆ (ಶನಿವಾರ) ಸಾವಿಗೀಡಾದರು.

ಇದಕ್ಕೂ ಮುನ್ನ ಅಮಿತ್​ ರಾಣಾ ಹೆಸರಿನ ಕಾನ್​ಸ್ಟೇಬಲ್​ ಒಬ್ಬರು ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net