

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ಹೀಗೆ ಪಿಕ್ ಪಾಕೆಟ್ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯದಲ್ಲಿ 5 ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್ಗಳಲ್ಲಿ '100 ನಾಟೌಟ್' ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, "ದೇಶದ ಇತಿಹಾಸ ಪುಟಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ದಾಖಲೆಗಳನ್ನು ಮುರಿಯುತ್ತಿದೆ. ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ" ಎಂದರು. ಇದರ ವಿರುದ್ಧ ಕೆಪಿಸಿಸಿ, '100 ನಾಟೌಟ್' ಆಂದೋಲನ ಹಮ್ಮಿಕೊಂಡಿದ್ದು, ಜೂನ್ 11 ರಿಂದ 15 ರವರೆಗೆ ಪೆಟ್ರೋಲ್ ಬಂಕ್ಗಳ ಮುಂದೆ ಪ್ರತಿಭಟನೆ ನಡೆಯಲಿದೆ ಎಂದರು.
ಜೂ. 11 ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 12 ರಂದು ತಾಲ್ಲೂಕು ಕೇಂದ್ರಗಳಲ್ಲಿ, 13 ರಂದು ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ, 14 ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿ ಪೆಟ್ರೋಲ್ ಬಂಕ್ಗಳಲ್ಲಿ, 15 ರಂದು ಪ್ರಮುಖ ಪೆಟ್ರೋಲ್ ಬಂಕ್ಗಳಲ್ಲಿ ಪ್ರತಿಭಟನೆ ಮಾಡಲಾಗುವುದು. ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎಂಎಸ್ಯುಐ, ರೈತ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಘಟಕ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯರು ಇದರಲ್ಲಿ ಬೆಳಿಗ್ಗೆ 11 ರಿಂದ 12 ರವರೆಗೆ ಒಂದು ಗಂಟೆ ಕಾಲ ಭಾಗವಹಿಸುವರು ಎಂದರು.
"ಎಲ್ಲ ಜಿಲ್ಲೆಗಳ ಉಸ್ತುವಾರಿಗೆ ಒಬ್ಬೊಬ್ಬ ನಾಯಕರನ್ನು ನೇಮಿಸಲಾಗುತ್ತಿದ್ದು, ಅವರು ಜೂಮ್ ಮೂಲಕ ಪ್ರತಿಭಟನೆ ವೀಕ್ಷಿಸಬೇಕು. ಈ ಪ್ರತಿಭಟನೆಯ 1 ನಿಮಿಷ ವಿಡಿಯೋ ಮಾಡಿ, ಪಕ್ಷದ ಐಟಿ ಸೆಲ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಮತ್ತು ಎಐಸಿಸಿಗೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ. ನಾನು, ನಮ್ಮ ಶಾಸಕರು, ಮಾಜಿ ಶಾಸಕರು, ಪಂಚಾಯ್ತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಕೋವಿಡ್ ನಿಯಮಾವಳಿ ಪಾಲಿಸಿ ಈ ಪ್ರತಿಭಟನೆ ಮಾಡುತ್ತೇವೆ" ಎಂದರು.
ಕೇಂದ್ರ ಸರ್ಕಾರ ಜನವರಿಯಲ್ಲಿ, ಫೆಬ್ರವರಿಯಲ್ಲಿ ಮತ್ತು ಮೇ ನಲ್ಲಿ ತಲಾ 16 ಬಾರಿ ಪೆಟ್ರೋಲ್ ಬೆಲೆ ಏರಿಸಿದೆ. ಚುನಾವಣೆ ನಡೆದ ಮಾರ್ಚ್, ಏಪ್ರಿಲ್ನಲ್ಲಿ ಬೆಲೆ ಏರಿಸಿಲ್ಲ. ಈ ವರ್ಷ ಒಟ್ಟು 48 ಬಾರಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಈ ಬೆಲೆ ಏರಿಕೆಯಿಂದ 21.60 ಲಕ್ಷ ಕೋಟಿ ರೂ. ಹಣವನ್ನು ಸಂಪಾದಿಸಿದೆ. ಆ ಮೂಲಕ ಜನರ ಜೇಬಿಗೆ ಕನ್ನ ಹಾಕಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿದ್ದು, ಕರೊನಾ ಸಮಯದಲ್ಲಿ ಸರ್ಕಾರ ನಮ್ಮ ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ. ತೈಲ ಬೆಲೆ ಅನುಗುಣವಾಗಿ ಇಂಧನ ಬೆಲೆ ಇಳಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಾವು ಒತ್ತಾಯ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
"ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನದಲ್ಲಿನ ದರದ ಜತೆ ಲೆಕ್ಕ ಹಾಕಿದರೆ, ಜಿಡಿಪಿಯು ಅವರಿಗಿಂತ ಕೆಳಗೆ ಕುಸಿದಿದೆ. ಬಲಿಷ್ಠ ಭಾರತಕ್ಕೆ ಇಂತಹ ದುಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ನರಸಿಂಹರಾವ್, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಕಾಲವನ್ನು ಮೆಲುಕು ಹಾಕಬೇಕು. ಆಗ ಯಾವ ರೀತಿ ಜನರ ಭಾವನೆ ಇತ್ತು, ಸರಕಾರ ಹೇಗೆ ತೆರಿಗೆ ನಿಯಂತ್ರಣ ಮಾಡಿತ್ತು ಅನ್ನುವುದನ್ನು ಗಮನಿಸಬೇಕು. ಈ ಸರ್ಕಾರ ಇದ್ಯಾವುದನ್ನು ಗಮನಿಸದೆ ನಿರ್ಧಾರ ಕೈಗೊಳ್ಳುತ್ತಿದೆ" ಎಂದು ದೂರಿದರು.