ಜನ್ರು ಮಾಡಿದ ತಪ್ಪಿಗೆ ಮೂಕ ಪ್ರಾಣಿಗಳಿಗೆ ಶಿಕ್ಷೆ: ಹಸಿವು ನೀಗಿಸಿಕೊಳ್ಳಲು 200 ಆನೆಗಳ ಹತ್ಯೆಗೆ ಸರ್ಕಾರದ ಅನುಮತಿ

elephants
Published on

ಜಿಂಬಾಬ್ವೆ: ಆಫ್ರಿಕಾ ದೇಶಗಳು ಭೀಕರ ಬರಗಾಲದಿಂದ ತತ್ತರಿಸುತ್ತಿವೆ. ಬರ ಪರಿಸ್ಥಿತಿಯಿಂದಾಗಿ ಆಫ್ರಿಕಾ ದೇಶಗಳು ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಂಬಾಬ್ವೆ ಕೂಡ ನಮೀಬಿಯಾ ಹಾದಿಯಲ್ಲಿ ಸಾಗುತ್ತಿದೆ. ಆನೆಗಳ ಅಧಿಕ ಜನಸಂಖ್ಯೆಯನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ 200 ಆನೆಗಳನ್ನು ಕೊಲ್ಲಲಾಗುವುದು ಎಂದು ಘೋಷಿಸಿದೆ. ಆನೆಗಳನ್ನು ಕೊಲ್ಲಲು ಜಿಂಬಾಬ್ವೆ ಉದ್ಯಾನವನಗಳು ಮತ್ತು ವನ್ಯಜೀವಿ ಪ್ರಾಧಿಕಾರಕ್ಕೆ (ZIMParks) ಸರ್ಕಾರ ಅನುಮತಿ ನೀಡಿದೆ.

ಜಿಂಬಾಬ್ವೆಯಲ್ಲಿ ಹೆಚ್ಚಿನ ಸಂಖ್ಯೆಯ ಆನೆಗಳಿಗೆ ನೆಲೆಯಾಗಿರುವ ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳನ್ನು ಕೊಲ್ಲಲಾಗುತ್ತದೆ. ದೇಶದಲ್ಲಿ ತಾಂಡವವಾಡುತ್ತಿರುವ ತೀವ್ರ ಬರ ಪರಿಸ್ಥಿತಿಯಿಂದಾಗಿ ಈ ವರ್ಷ ಈಗಾಗಲೇ 160 ಆನೆಗಳು ಜಿಂಬಾಬ್ವೆಯಲ್ಲಿ ಮೃತಪಟ್ಟಿವೆ. ಇದೀಗ ಹೆಚ್ಚುವರಿಗೆ ಆನೆಗಳನ್ನು ಕೊಲ್ಲುವ ನಿರ್ಧಾರವನ್ನು ಜಿಂಬಾಬ್ವೆಯ ಪರಿಸರ ಸಚಿವ ಸಿತೆಂಬಿಸೊ ನ್ಯೋನಿ ಪ್ರಕಟಿಸಿದ್ದಾರೆ.

ಮಾನವ-ಆನೆ ಸಂಘರ್ಷ ಮತ್ತು ಆಹಾರ ಭದ್ರತೆಯನ್ನು ಸಮತೋಲನಗೊಳಿಸುವ ಅಗತ್ಯವನ್ನು ಸಚಿವ ಸಿತೆಂಬಿಸೊ ನ್ಯೋನಿ ಒತ್ತಿ ಹೇಳಿದರು. ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಸಾರ್ವಜನಿಕರಿಗೆ ಅರ್ಪಿಸುವ ನಮೀಬಿಯಾ ಸರ್ಕಾರದ ವಿಧಾನವನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.

ಅಂದಹಾಗೆ ಜಿಂಬಾಬ್ವೆ 1 ಲಕ್ಷಕ್ಕೂ ಹೆಚ್ಚು ಆನೆಗಳನ್ನು ಹೊಂದಿರುವ ಎರಡನೇ ಅತಿದೊಡ್ಡ ದೇಶ ಎಂದು ಕರೆಯಲ್ಪಡುತ್ತದೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿಯೇ 65000 ಆನೆಗಳಿವೆ. ಈ ಉದ್ಯಾನವನ ತನ್ನ ಸಾಮರ್ಥ್ಯವನ್ನೇ ಮೀರಿದೆ. ದೇಶದಲ್ಲಿ ಆನೆಗಳನ್ನು ಕೊಲ್ಲುವ ಕಾರ್ಯಾಚರಣೆಯನ್ನು ಕೊನೆಯ ಬಾರಿಗೆ 1988ರಲ್ಲಿ ನಡೆಸಲಾಯಿತು. ಜಿಂಬಾಬ್ವೆ ಪಕ್ಕದ ನಮೀಬಿಯಾದಲ್ಲಿಯೂ ಬರ ತೀವ್ರವಾಗಿದೆ. ಇದರಿಂದ 83 ಆನೆಗಳು ಸೇರಿದಂತೆ 160 ಕಾಡು ಪ್ರಾಣಿಗಳು ಮೃತಪಟ್ಟಿವೆ.

ದೇಶದ ಅರಣ್ಯಗಳಲ್ಲಿರುವ 700 ಕಾಡು ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ಜನರಿಗೆ ವಿತರಿಸಲು ನಮೀಬಿಯಾ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ 83 ಆನೆಗಳು, 30 ಹಿಪ್ಪೋಗಳು (ನೀರಿನ ಕುದುರೆಗಳು), 50 ಇಂಪಾಲಾಗಳು, 100 ನೀಲಿ ಕಾಡಾನೆಗಳು ಮತ್ತು 300 ಜೀಬ್ರಾಗಳನ್ನು ಕೊಲ್ಲಲಿವೆ. ಹಸಿವಿನಿಂದ ಬಳಲುತ್ತಿರುವ ಜನರಿಗೆ ಅವುಗಳ ಮಾಂಸವನ್ನು ಹಂಚುವುದಾಗಿ ನಮೀಬಿಯಾ ಸರ್ಕಾರ ತಿಳಿಸಿದೆ.

ಮೂಕಪ್ರಾಣಿಗಳಿಗೇಕೆ ಈ ಶಿಕ್ಷೆ?

ಬರಗಾಲ ಉಂಟಾಗಲು ಮಾನವನ ದುರಾಸೆಯೇ ಕಾರಣ ಎಂಬುದು ಸಾರ್ವಕಾಲಿಕ ಸತ್ಯ. ಆದರೆ, ಇಲ್ಲಿ ಶಿಕ್ಷೆಗೆ ಗುರಿಯಾಗುತ್ತಿರುವುದು ಮಾತ್ರ ಮೂಕ ಪ್ರಾಣಿಗಳು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ. ಮೂಕ ಪ್ರಾಣಿಗಳ ಉಳಿವಿಗೆ ವರುಣನೇ ಕೃಪೆ ತೋರಬೇಕಷ್ಟೇ.

ನಮೀಬಿಯಾ ಪ್ರಾಣಿಗಳ ರಕ್ಷಣೆಗೆ ಮಿಡಿದ ಅನಂತ್​ ಅಂಬಾನಿಯ ವಂತಾರಾ

ನಮೀಬಿಯಾದಲ್ಲಿ ಬರ ತಾಂಡವವಾಡುತ್ತಿದ್ದು, ಜನರ ಹಸಿವು ನೀಗಿಸಲು ಅಲ್ಲಿನ ಸರ್ಕಾರ ಮಾಂಸಕ್ಕಾಗಿ ಆನೆಗಳು ಸೇರಿದಂತೆ 700 ಅಪರೂಪದ ಕಾಡುಪ್ರಾಣಿಗಳನ್ನು ಕೊಲ್ಲಲು ಆದೇಶ ನೀಡಿರುವ ಕ್ರಮವನ್ನು ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರ ವಂತಾರಾ ಸಂಸ್ಥೆ ಖಂಡಿಸಿದ್ದು, ಪ್ರಾಣಿಗಳನ್ನು ಕೊಲ್ಲುವುದನ್ನು ತಪ್ಪಿಸಲು ಯಾವುದೇ ಸಹಾಯವನ್ನು ನಾವು ನೀಡುತ್ತೇವೆ ಎಂದಿದೆ. ನಮ್ಮ ವಂತಾರಾದಲ್ಲಿ ಪ್ರತಿ ಪ್ರಾಣಿಯ ಯೋಗಕ್ಷೇಮ ಮತ್ತು ಉಳಿವಿಗೆ ಬೆದರಿಕೆಯೊಡ್ಡುವ ಯಾವುದೇ ಪರಿಸ್ಥಿತಿಯಿಂದ ರಕ್ಷಣೆ ಮಾಡುವ ದೃಷ್ಟಿಕೋನವನ್ನು ಹೊಂದಿದ್ದೇವೆ. ವಂತಾರಾವು ಯಾವುದೇ ಪರಿಸ್ಥಿತಿಯೊಂದಿಗೆ ಸಂಪೂರ್ಣ ಒಗ್ಗಟ್ಟಿನಿಂದ ನಿಲ್ಲುತ್ತದೆ ಮತ್ತು ಮುನ್ನಡೆಯುತ್ತದೆ. ಹೀಗಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ತಪ್ಪಿಸಲು ನಾವು ಯಾವುದೇ ಸಹಾಯವನ್ನು ನೀಡಲು ಬಯಸುತ್ತೇವೆ. ಈ ಹಿಂದೆ ವಂತಾರಾವು ಸಾಯುವ ಅಂಚಿನಲ್ಲಿರುವ ಪ್ರಾಣಿಗಳಿಗೆ ಕೊಲ್ಲುವಿಕೆಗೆ ಪರ್ಯಾಯವಾಗಿ ಆಶ್ರಯವನ್ನು ಒದಗಿಸಿದೆ. ವಂತಾರಾದಲ್ಲಿ ನಾವು ನಮ್ಮ ಅತ್ಯುತ್ತಮ ಹೆಜ್ಜೆ ಇಡಲು ಸಿದ್ಧರಿದ್ದೇವೆ ಮತ್ತು ಜೀವಮಾನದ ಆರೈಕೆ ಅಥವಾ ತಾತ್ಕಾಲಿಕ ವಸತಿಗಳನ್ನು ಕೊಲ್ಲುವಿಕೆಗೆ ಪರ್ಯಾಯವಾಗಿ ಪ್ರಾಣಿಗಳಿಗೆ ಒದಗಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ನಮೀಬಿಯಾ ಗಣರಾಜ್ಯ ಮತ್ತು ಅದರ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಮತ್ತು ಪ್ರಾಣಿಗಳನ್ನು ಉಳಿಸುವ ಮತ್ತು ಅವರಿಗೆ ಅಗತ್ಯವಾದ ನೆರವು ಒದಗಿಸುವ ಮಾರ್ಗವನ್ನು ಕಂಡುಕೊಳ್ಳುತ್ತೇವೆ.

ಇಲ್ಲಿ ಪ್ರತಿಯೊಂದು ಪ್ರಾಣಿಯ ಜೀವವೂ ತುಂಬಾ ಅಮೂಲ್ಯವಾದುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ವಂತಾರಾ ತಂಡವು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಸಿದ್ಧಪಡಿಸಿರುವ ವಿವಿಧ ಆಯ್ಕೆಗಳು ಮತ್ತು ಪ್ರಸ್ತಾವನೆಗಳ ಬಗ್ಗೆ ಚರ್ಚಿಸಲು ಮತ್ತು ಅವುಗಳನ್ನು ಪರಿಗಣಿಸಲು ನಿಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಡುವಂತೆ ನಾವು ವಿನಂತಿಸುತ್ತೇವೆ ಎಂದು ವಂತಾರಾ ಸಿಇಒ ವಿವಾನ್​ ಕರಣಿ ಅವರು ರಿಪಬ್ಲಿಕ್​ ಆಫ್​ ನಮೀಬಿಯಾದ ಹೈಕಮಿಷನರ್​ಗೆ ಈ ಹಿಂದೆ ಪತ್ರ ಬರೆದು ವಿನಂತಿಸಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net