ಕೊಹ್ಲಿ ಅಲ್ಲ, ರೋಹಿತ್​ ಅಂತೂ ಅಲ್ವೆ ಅಲ್ಲ…​ ಹೆಡ್​​ ಪ್ರಕಾರ ಟೀಮ್​​ ಇಂಡಿಯಾದ ಸ್ಟಾರ್​ ಇವರಂತೆ!

Travis Head
Published on

ನವದೆಹಲಿ: ಸುಮಾರು ಒಂದೂವರೆ ತಿಂಗಳ ಸುದೀರ್ಘ ವಿರಾಮದ ಬಳಿಕ ಟೀಮ್​ ಇಂಡಿಯಾ ಮತ್ತೆ ಮೈದಾನಕ್ಕೆ ಮರಳಿದೆ. ಬಾಂಗ್ಲಾದೇಶದ ವಿರುದ್ಧ ಮುಂಬರುವ ಟೆಸ್ಟ್ ಮತ್ತು ಟಿ20 ಸರಣಿಯ ಅಭ್ಯಾಸ ಆರಂಭವಾಗಿದೆ. ಈ ಸರಣಿಯ ನಂತರ, ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಅಲ್ಲದೆ, ಆಸ್ಟ್ರೇಲಿಯಾ ವಿರುದ್ಧವೂ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ಗಾಗಿ ಈ ಟೆಸ್ಟ್​ ಸರಣಿಗಳು ಭಾರತದ ಪಾಲಿಗೆ ನಿರ್ಣಾಯಕವಾಗಿದೆ. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ ಟೀಮ್ ಇಂಡಿಯಾದ ಯುವ ಆಟಗಾರನ ಮೇಲೆ ಪ್ರಶಂಸೆಯ ಮಳೆಗರೆದಿದ್ದಾರೆ. ಹೆಡ್​ ಪ್ರಕಾರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಲ್ಲ.. ಟೀಮ್​ ಇಂಡಿಯಾ ಸೂಪರ್ ಸ್ಟಾರ್ ಈ ಕ್ರಿಕೆಟಿಗನಂತೆ! ಯಾರು ಆ ಕ್ರಿಕೆಟಿಗ? ಆತನ ಬಗ್ಗೆ ಹೆಡ್​ ಹೇಳಿದ್ದೇನು? ಎಂಬುದನ್ನು ನಾವೀಗ ತಿಳಿಯೋಣ.

ನವೆಂಬರ್‌ ತಿಂಗಳಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯತ್ತ ಗಮನ ಹರಿಸಿರುವ ಭಾರತ, ಪೂರ್ವತಯಾರಿಯಾಗಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್​ ಸರಣಿ ಆಡಲಿದೆ. ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್, ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಹೆಡ್​, ಗಿಲ್ ಪ್ರದರ್ಶನವನ್ನು ಶ್ಲಾಘಿಸಿದರು. ಗಿಲ್​ ಟೀಮ್​ ಇಂಡಿಯಾ ಕ್ರಿಕೆಟ್‌ನ ಸೂಪರ್‌ಸ್ಟಾರ್ ಎಂದರು. ಇದುವರೆಗಿನ ತಮ್ಮ ವೃತ್ತಿ ಜೀವನದಲ್ಲಿ ಗಿಲ್​ ಅವರು ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಸ್ಪಿನ್‌ನಲ್ಲಿಯೂ ಅವರು ಅದ್ಭುತವಾಗಿ ಆಡುತ್ತಾರೆ. ಅವರೊಬ್ಬ ಕ್ಲಾಸ್ ಬ್ಯಾಟರ್. ಗಿಲ್​ ಅವರು ಟೀಮ್​ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎಂದು ಹೆಡ್​ ಕೊಂಡಾಡಿದ್ದಾರೆ.

ಇನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ಟ್ರಾವಿಸ್ ಹೆಡ್ ಟೀಮ್ ಇಂಡಿಯಾ ಬಗ್ಗೆ ಕೆಲವು ಕಾಮೆಂಟ್​ಗಳನ್ನು ಮಾಡಿದ್ದಾರೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ಮತ್ತು ಕೊನೆಯ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಶತಕಗಳನ್ನು ಗಳಿಸಿದ ಕಾರಣ ಭಾರತವು ತನ್ನ ನೆಚ್ಚಿನ ಎದುರಾಳಿ ತಂಡ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಭಾರತವು ನನ್ನ ನೆಚ್ಚಿನ ಎದುರಾಳಿ ತಂಡವಲ್ಲ ಎಂದು ಟ್ರಾವಿಸ್ ಹೆಡ್ ಹೇಳಿದರು. ಟೀಮ್​ ಇಂಡಿಯಾ ವಿರುದ್ಧ ಆಡುವುದು ತುಂಬಾ ಕಷ್ಟವಾಗಿತ್ತು ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಹೆಡ್ ಇದೀಗ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಟೀಮ್​ ಇಂಡಿಯಾದ ಮೇಲೂ ಅದೇ ತುಡಿತ ತೋರಿಸಲು ಉತ್ಸುಕರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net