ಮಾಂಸಕ್ಕಾಗಿ ಕೊಲ್ಲಬೇಡಿ ನಾವು ಸಹಾಯ ಮಾಡ್ತೀವಿ: ನಮೀಬಿಯಾ ಪ್ರಾಣಿಗಳ ರಕ್ಷಣೆಗೆ ಮಿಡಿದ ಅನಂತ್​ ಅಂಬಾನಿಯ ವಂತಾರಾ

Anant Ambani’s Vantara
Published on

ನವದೆಹಲಿ: ನಮೀಬಿಯಾದಲ್ಲಿ ಬರ ತಾಂಡವವಾಡುತ್ತಿದ್ದು, ಜನರ ಹಸಿವು ನೀಗಿಸಲು ಅಲ್ಲಿನ ಸರ್ಕಾರ ಮಾಂಸಕ್ಕಾಗಿ ಆನೆಗಳು ಸೇರಿದಂತೆ 700 ಅಪರೂಪದ ಕಾಡುಪ್ರಾಣಿಗಳನ್ನು ಕೊಲ್ಲಲು ಆದೇಶ ನೀಡಿರುವ ಕ್ರಮವನ್ನು ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರ ವಂತಾರಾ ಸಂಸ್ಥೆ ಖಂಡಿಸಿದ್ದು, ಪ್ರಾಣಿಗಳನ್ನು ಕೊಲ್ಲುವುದನ್ನು ತಪ್ಪಿಸಲು ಯಾವುದೇ ಸಹಾಯವನ್ನು ನೀಡಲು ನಾವು ರೆಡಿ ಎನ್ನುವ ಮೂಲಕ ಪ್ರಾಣಿ ಸಂರಕ್ಷಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಪ್ರಾಣಿ ಸಂರಕ್ಷಣೆ ನಿಟ್ಟಿನಲ್ಲಿ ವಂತಾರಾ ಸಂಸ್ಥೆಯ ಸಿಇಒ ವಿವಾನ್​ ಕರಣಿ ಅವರು ನವದೆಹಲಿಯಲ್ಲಿರುವ ರಿಪಬ್ಲಿಕ್​ ಆಫ್​ ನಮೀಬಿಯಾದ ಹೈಕಮಿಷನರ್​ಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಮತ್ತು ಪ್ರಾಣಿಗಳನ್ನು ಕೊಲ್ಲದೇ ಪರ್ಯಾಯ ವ್ಯವಸ್ಥೆಯ ಬಗ್ಗೆ ಕುಳಿತು ಚರ್ಚಿಸುವ ಬಗ್ಗೆ ತಿಳಿಸಿದ್ದಾರೆ.

ಭಾರತದ ಗುಜರಾತ್ ಮೂಲದ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ಸಂಸ್ಥೆ ವಂತಾರಾ ಪರವಾಗಿ ನಾನು ಪತ್ರ ಬರೆಯುತ್ತಿದ್ದೇನೆ. ವಂತಾರಾ ಒಂದು ಸಂಸ್ಥೆಯಾಗಿ ಗ್ರೀನ್ಸ್ ಝೂಲಾಜಿಕಲ್ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರ ಮೂಲಕ ಪ್ರಾಣಿಗಳನ್ನು ರಕ್ಷಿಸಲು, ಆರೈಕೆ ಮಾಡಲು ಮತ್ತು ಸಂರಕ್ಷಿಸಲು ದಣಿವರಿಯಿಲ್ಲದೆ ಕೆಲಸ ಮಾಡುವ ಪ್ರಾಣಿ ಕಲ್ಯಾಣ ಸಂಸ್ಥೆಗಳನ್ನು ಮೀಸಲಿಟ್ಟಿದೆ. ನಮ್ಮದು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಗುರುತಿಸಲ್ಪಟ್ಟ ಪಾರುಗಾಣಿಕಾ ಕೇಂದ್ರ ಮತ್ತು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವಾಗಿದ್ದು, 2000ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳ ಆರೈಕೆ ಮತ್ತು ಸಂರಕ್ಷಣೆಗೆ ಸೇವೆ ಸಲ್ಲಿಸುತ್ತಿದೆ. ಅವುಗಳಲ್ಲಿ ಹೆಚ್ಚಿನವು ಭಾರತ ಮತ್ತು ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭಗಳಲ್ಲಿ ರಕ್ಷಿಸಲ್ಪಟ್ಟ ಪ್ರಾಣಿಗಳಾಗಿವೆ. ಆನೆ ಶಿಬಿರವಾಗಿರುವ ರಾಧೆ ಕೃಷ್ಣ ದೇವಸ್ಥಾನದ ಆನೆ ಕಲ್ಯಾಣ ಟ್ರಸ್ಟ್ ಕೂಡ ನಮ್ಮ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಟ್ಟಾರೆ 3500 ಎಕರೆಗಳನ್ನು ಒಳಗೊಂಡಿರುವ ಗ್ರೀನ್ಸ್ ಝೂಲಾಜಿಕಲ್ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಿಶ್ವದರ್ಜೆಯ ಆಸ್ಪತ್ರೆಗಳು ಮತ್ತು ಸಂಶೋಧನಾ ಸೌಲಭ್ಯಗಳನ್ನು ಒಳಗೊಂಡಿರುವ ವೈಜ್ಞಾನಿಕ ಮತ್ತು ಆಧುನಿಕ ಮೂಲಸೌಕರ್ಯವಿದ್ದು, 2000 ಜನರನ್ನು ಪ್ರಾಣಿಗಳ ಆರೈಕೆಗಾಗಿ ನೇಮಿಸಿಕೊಳ್ಳಲಾಗಿದೆ.

ರಿಪಬ್ಲಿಕ್ ಆಫ್ ನಮೀಬಿಯಾದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಅದರ ಸವಾಲುಗಳನ್ನು ಎದುರಿಸಲು ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೆಲ ಸುದ್ದಿ ಮಾಧ್ಯಮಗಳ ವರದಿಗಳು ಸೂಚಿಸುತ್ತವೆ. ಪ್ರಾಣಿಗಳನ್ನು ಕೊಂದು ಮಾಂಸ ಹಂಚಿಕೆ ಮಾಡುವುದು ಕೂಡ ನಮೀಬಿಯಾದ ಬರ-ಪರಿಹಾರ ಕ್ರಮಗಳಲ್ಲಿ ಒಂದೆಂದು ವರದಿಯಾಗಿವೆ. ನಮ್ಮ ವಂತಾರಾದಲ್ಲಿ ಪ್ರತಿ ಪ್ರಾಣಿಯ ಯೋಗಕ್ಷೇಮ ಮತ್ತು ಉಳಿವಿಗೆ ಬೆದರಿಕೆಯೊಡ್ಡುವ ಯಾವುದೇ ಪರಿಸ್ಥಿತಿಯಿಂದ ರಕ್ಷಣೆ ಮಾಡುವ ದೃಷ್ಟಿಕೋನವನ್ನು ಹೊಂದಿದ್ದೇವೆ. ವಂತಾರಾವು ಯಾವುದೇ ಪರಿಸ್ಥಿತಿಯೊಂದಿಗೆ ಸಂಪೂರ್ಣ ಒಗ್ಗಟ್ಟಿನಿಂದ ನಿಲ್ಲುತ್ತದೆ ಮತ್ತು ಮುನ್ನಡೆಯುತ್ತದೆ. ಹೀಗಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ತಪ್ಪಿಸಲು ನಾವು ಯಾವುದೇ ಸಹಾಯವನ್ನು ನೀಡಲು ಬಯಸುತ್ತೇವೆ.

ಈ ಹಿಂದೆ ವಂತಾರಾವು ಸಾಯುವ ಅಂಚಿನಲ್ಲಿರುವ ಪ್ರಾಣಿಗಳಿಗೆ ಕೊಲ್ಲುವಿಕೆಗೆ ಪರ್ಯಾಯವಾಗಿ ಆಶ್ರಯವನ್ನು ಒದಗಿಸಿದೆ. ವಂತಾರಾದಲ್ಲಿ ನಾವು ನಮ್ಮ ಅತ್ಯುತ್ತಮ ಹೆಜ್ಜೆ ಇಡಲು ಸಿದ್ಧರಿದ್ದೇವೆ ಮತ್ತು ಜೀವಮಾನದ ಆರೈಕೆ ಅಥವಾ ತಾತ್ಕಾಲಿಕ ವಸತಿಗಳನ್ನು ಕೊಲ್ಲುವಿಕೆಗೆ ಪರ್ಯಾಯವಾಗಿ ಪ್ರಾಣಿಗಳಿಗೆ ಒದಗಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ನಮೀಬಿಯಾ ಗಣರಾಜ್ಯ ಮತ್ತು ಅದರ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಮತ್ತು ಪ್ರಾಣಿಗಳನ್ನು ಉಳಿಸುವ ಮತ್ತು ಅವರಿಗೆ ಅಗತ್ಯವಾದ ನೆರವು ಒದಗಿಸುವ ಮಾರ್ಗವನ್ನು ಕಂಡುಕೊಳ್ಳುತ್ತೇವೆ.

ಇಲ್ಲಿ ಪ್ರತಿಯೊಂದು ಪ್ರಾಣಿಯ ಜೀವವೂ ತುಂಬಾ ಅಮೂಲ್ಯವಾದುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ವಂತಾರಾ ತಂಡವು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಸಿದ್ಧಪಡಿಸಿರುವ ವಿವಿಧ ಆಯ್ಕೆಗಳು ಮತ್ತು ಪ್ರಸ್ತಾವನೆಗಳ ಬಗ್ಗೆ ಚರ್ಚಿಸಲು ಮತ್ತು ಅವುಗಳನ್ನು ಪರಿಗಣಿಸಲು ನಿಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಡುವಂತೆ ನಾವು ವಿನಂತಿಸುತ್ತೇವೆ ಎಂದು ವಂತಾರಾ ಸಿಇಒ ವಿವಾನ್​ ಕರಣಿ ಅವರು ರಿಪಬ್ಲಿಕ್​ ಆಫ್​ ನಮೀಬಿಯಾದ ಹೈಕಮಿಷನರ್​ಗೆ ಪತ್ರ ಬರೆದು ವಿನಂತಿಸಿದ್ದಾರೆ.

Vantara Foundation

ನಮೀಬಿಯಾ ಬರ

ಅಂದಹಾಗೆ ಆಫ್ರಿಕಾದ ನಮೀಬಿಯಾದಲ್ಲಿ ಬರ ತಾಂಡವವಾಡುತ್ತಿದೆ. ತಿನ್ನಲು ಅನ್ನ, ಕುಡಿಯಲು ನೀರಿಲ್ಲದೆ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಕಳೆದ 100 ವರ್ಷಗಳಲ್ಲಿ ದೇಶವು ಭೀಕರ ಬರ ಎದುರಿಸುತ್ತಿದ್ದು, ಜನರ ಹಸಿವು ನೀಗಿಸಲು ನಮೀಬಿಯಾ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ದೇಶದ ಅರಣ್ಯಗಳಲ್ಲಿ ಸಂಚರಿಸುವ ಅಪರೂಪದ 700 ಕಾಡುಪ್ರಾಣಿಗಳನ್ನು ಕೊಂದು ಮಾಂಸವನ್ನು ಜನರಿಗೆ ವಿತರಿಸಲು ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ 83 ಆನೆಗಳು, 30 ಹಿಪ್ಪೋಗಳು (ನೀರಾನೆ), 60 ಎಮ್ಮೆ, 50 ಕೃಷ್ಣಮೃಗ, 100 ಕಾಡು ಎಮ್ಮೆ ಮತ್ತು 300 ಜೀಬ್ರಾಗಳನ್ನು ಕೊಲ್ಲಲಿವೆ ಎಂದು ಪರಿಸರ ಮತ್ತು ಅರಣ್ಯ ಪ್ರವಾಸೋದ್ಯಮ ಸಚಿವಾಲಯ ಈ ಹಿಂದೆ ತಿಳಿಸಿದ್ದು, ವೃತ್ತಿಪರ ಬೇಟೆಗಾರರಿಂದ ಪ್ರಾಣಿಗಳನ್ನು ಕೊಲ್ಲಲಾಗುವುದು ಎಂದು ಹೇಳಿತ್ತು. ಈ ಹಿನ್ನೆಲೆ ವಂತಾರಾ ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net