More

  24 ಗಂಟೆಯಲ್ಲಿ 3500 ಕಿ.ಮೀ ಪ್ರಯಾಣಿಸಿ ಆನೆ ಮತ್ತದರ ಮರಿಯ ಜೀವ ಉಳಿಸಿದ ಅನಂತ್​ ಅಂಬಾನಿಯ ವಂತಾರಾ ತಂಡ!

  ನವದೆಹಲಿ: ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರ ವಂತಾರಾ ತಂಡವು ಕೇವಲ 24 ಗಂಟೆಗಳಲ್ಲಿ ಗುಜರಾತಿನ ಜಾಮ್​ನಗರದಿಂದ ತ್ರಿಪುರಾಗೆ ಬರೋಬ್ಬರಿ 3500 ಕಿ.ಮೀ ದೂರ ಪ್ರಯಾಣಿಸಿ ಗಾಯಗೊಂಡ ಆನೆ ಮತ್ತು ಅದರ ಮರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರಕ್ಷಣೆ ಮಾಡಿದೆ. ಈ ಮೂಲಕ ಪ್ರಾಣಿಗಳ ಉಳಿವಿಗಾಗಿ ಯಾವುದೇ ಸವಾಲು ಸ್ವೀಕರಿಸಲು ನಾವು ಬದ್ಧ ಎಂಬ ಸಂದೇಶವನ್ನು ಸಾರಿದೆ.

  ವಂತಾರಾ ಎಂಬುದು ರಿಲಯನ್ಸ್ ಫೌಂಡೇಶನ್​ನ ಒಂದು ಪ್ರಾಜೆಕ್ಟ್. ವಂತಾರಾ ಅಂದರೆ ಕಾಡಿನ ನಕ್ಷತ್ರ ಎಂದರ್ಥ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿಯೇ ಈ ವಂತಾರಾ ಪ್ರಾಜೆಕ್ಟ್​ನ ಉದ್ದೇಶ. ಆನೆ ಮತ್ತು ಅದರ ಮರಿ ಅಪಾಯದಲ್ಲಿದೆ ಎಂದು ಕಳೆದ ಶನಿವಾರ ಇಮೇಲ್​ ಸಂದೇಶ ಸ್ವೀಕರಿಸಿದ ಬೆನ್ನಲ್ಲೇ ಸಕಾಲಕ್ಕೆ ಸ್ಪಂದಿಸಿದ ವಂತಾರಾ ತಂಡ ಮೂಕ ಜೀವಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮರು ಜನ್ಮ ನೀಡಿದೆ.

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ, ವಂತಾರಾ ವೈದ್ಯರ ತಂಡವನ್ನು ಜಾಮ್‌ನಗರದಿಂದ ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿರುವ ಕೈಲಾಸಹರ್‌ಗೆ ತ್ವರಿತವಾಗಿ ಕಳುಹಿಸಿಕೊಟ್ಟಿರುವ ದೃಶ್ಯವಿದೆ. ಕೈಲಾಸಹರ್‌ಗೆ ಆಗಮಸಿದ ಬಳಿಕ ವೈದ್ಯರ ತಂಡ ತೊಂದರೆಗೊಳಗಾದ ಆನೆ ಮತ್ತು ಅದರ ಮರಿಗೆ ತಕ್ಷಣದ ಆರೈಕೆಯನ್ನು ನೀಡುತ್ತಾರೆ. ವಿಡಿಯೋದಲ್ಲಿ ಮಹಿಳೆಯ ಹಿನ್ನೆಲೆ ಧ್ವನಿ ಇದ್ದು, ಮೂಕ ಜೀವಿಗಳಿಗೆ ಸಕಾಲಕ್ಕೆ ನೆರವು ನೀಡಿದ ಪ್ರಾಣ ಉಳಿಸಿದ್ದಕ್ಕೆ ಅನಂತ್​ ಅಂಬಾನಿ ಮತ್ತು ಅವರ ವಂತಾರಾ ತಂಡಕ್ಕೆ ಧನ್ಯವಾದ ಹೇಳಲಾಗಿದೆ.

  ಏನಿದು ವಂತಾರಾ?
  ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರು ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನು ತೆರೆಯುವ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ ಅನ್ನು 2024ರ ಫೆ.26ರಂದು ಘೋಷಣೆ ಮಾಡಿದರು. ಈ ಪ್ರಾಜೆಕ್ಟ್​ ಹೆಸರು ವಂತಾರಾ. ಇದರ ಅರ್ಥ ಕಾಡಿನ ನಕ್ಷತ್ರ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಈ ಯೋಜನೆಯ ಪ್ರಮುಖ ಗುರಿಯಾಗಿದ್ದು, ದೇಶ ಮತ್ತು ವಿದೇಶ ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಗುಜರಾತಿನ ರಿಲಯನ್ಸ್​ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆಗಳಷ್ಟು ವಿಶಾಲ ಪ್ರದೇಶವಿದ್ದು, ವಂತಾರಾ ಕಾರ್ಯಕ್ರಮದ ಅಡಿಯಲ್ಲಿ ಈ ಜಾಗವನ್ನು ಕಾಡಿನಂತಹ ಪರಿಸರಕ್ಕೆ ಪರಿವರ್ತಿಸಲಾಗಿದೆ. ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪಾಲನೆಗಾಗಿ ನೈಸರ್ಗಿಕ, ಸಮೃದ್ಧ ಮತ್ತು ಹಸಿರು ಆವಾಸಸ್ಥಾನವನ್ನು ಹೊಂದಿದೆ. ಜಾಗತಿಕವಾಗಿ ಪ್ರಾಣಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವವರಲ್ಲಿ ಮೂಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ವಂತಾರಾ ಗುರಿ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವಂತಾರಾ ಪ್ರಾಜೆಕ್ಟ್​ ಗುಜರಾತಿನ ಜಾಮ್‌ನಗರದಲ್ಲಿ ರಿಲಯನ್ಸ್‌ನ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಗಳ ನಿರ್ದೇಶಕರಾದ ಅನಂತ್​ ಅಂಬಾನಿ ಅವರ ಪರಿಕಲ್ಪನೆಯಾಗಿದೆ ಮತ್ತು ಕನಸಿನ ಯೋಜನೆಯೂ ಆಗಿದೆ.

  See also  ಮೈಸೂರು ದಸರಾ ಆನೆಗಳಿಗೂ ಕೋವಿಡ್‌ ಟೆಸ್ಟ್‌!

  ವಂತಾರಾ ಅತ್ಯಾಧುನಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು, ಸಂಶೋಧನೆ ಮತ್ತು ಶೈಕ್ಷಣಿಕ ಕೇಂದ್ರಗಳನ್ನು ಒಳಗೊಂಡಂತೆ ಅತ್ಯುತ್ತಮ ಗುಣಮಟ್ಟದ ಪ್ರಾಣಿ ಸಂರಕ್ಷಣೆ ಮತ್ತು ಆರೈಕೆ ಘಟಕಗಳನ್ನು ರಚಿಸುವತ್ತ ಗಮನಹರಿಸಿದೆ. ವಂತಾರಾವು ತನ್ನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸುಧಾರಿತ ಸಂಶೋಧನೆ ಮತ್ತು ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಮತ್ತು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಫಾರ್ ನೇಚರ್ (WWF) ನಂತಹ ಸಂಸ್ಥೆಗಳೊಂದಿಗೆ ಸಹಯೋಗವನ್ನು ಸಂಯೋಜಿಸುವತ್ತ ಗಮನಹರಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

  ಪ್ರಾಣಿ ಸಂಕುಲಕ್ಕೆ ಜೀವನಾಡಿ ವಂತಾರಾ ಯೋಜನೆ: ಅನಂತ್​ ಅಂಬಾನಿ ಘೋಷಣೆ, ಭಾರತದಲ್ಲಿ ಇದೇ ಮೊದಲು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts