More

    ಪ್ರಾಣಿ ಸಂಕುಲಕ್ಕೆ ಜೀವನಾಡಿ ವಂತಾರಾ ಯೋಜನೆ: ಅನಂತ್​ ಅಂಬಾನಿ ಘೋಷಣೆ, ಭಾರತದಲ್ಲಿ ಇದೇ ಮೊದಲು

    ನವದೆಹಲಿ: ಮದುವೆಯ ಹೊಸ್ತಿಲಲ್ಲೇ ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರು ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರವನ್ನು ತೆರೆಯುವ ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ ಅನ್ನು ಇಂದು (ಫೆ.26) ಘೋಷಣೆ ಮಾಡಿದ್ದಾರೆ. ಈ ಮೂಲಕ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ತಮ್ಮ ಕನಸಿನ ಯೋಜನೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

    ರಿಲಯನ್ಸ್​ ಇಂಡಸ್ಟ್ರೀಸ್​ ಮತ್ತು ರಿಲಯನ್ಸ್​ ಫೌಂಡೇಶನ್​ ಈ ಯೋಜನೆಯನ್ನು ಘೋಷಣೆ ಮಾಡಿದೆ. ಈ ಪ್ರಾಜೆಕ್ಟ್​ ಹೆಸರು ವಂತಾರಾ. ಇದರ ಅರ್ಥ ಕಾಡಿನ ನಕ್ಷತ್ರ. ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಪೋಷಣೆ ಮತ್ತು ಗಾಯಗೊಂಡ ಪ್ರಾಣಿಗಳ ಪುನರ್ವಸತಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಈ ಯೋಜನೆಯ ಪ್ರಮುಖ ಗುರಿಯಾಗಿದ್ದು, ದೇಶ ಮತ್ತು ವಿದೇಶ ಎರಡರಲ್ಲೂ ಕಾರ್ಯನಿರ್ವಹಿಸಲಿದೆ.

    Vantara 01

    ಗುಜರಾತಿನ ರಿಲಯನ್ಸ್​ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಗ್ರೀನ್ ಬೆಲ್ಟ್‌ನಲ್ಲಿ 3000 ಎಕರೆಗಳಷ್ಟು ವಿಶಾಲ ಪ್ರದೇಶವಿದ್ದು, ವಂತಾರಾ ಕಾರ್ಯಕ್ರಮದ ಅಡಿಯಲ್ಲಿ ಈ ಜಾಗವನ್ನು ಕಾಡಿನಂತಹ ಪರಿಸರಕ್ಕೆ ಪರಿವರ್ತಿಸಲಾಗಿದೆ. ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಪಾಲನೆಗಾಗಿ ನೈಸರ್ಗಿಕ, ಸಮೃದ್ಧ ಮತ್ತು ಹಸಿರು ಆವಾಸಸ್ಥಾನವನ್ನು ಹೊಂದಿದೆ. ಜಾಗತಿಕವಾಗಿ ಪ್ರಾಣಿ ಸಂರಕ್ಷಣಾ ಪ್ರಯತ್ನಗಳಿಗೆ ಪ್ರಮುಖ ಕೊಡುಗೆ ನೀಡುವವರಲ್ಲಿ ಮೂಂಚೂಣಿ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ವಂತಾರಾ ಗುರಿ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಈ ವಂತಾರಾ ಪ್ರಾಜೆಕ್ಟ್​ ಗುಜರಾತಿನ ಜಾಮ್‌ನಗರದಲ್ಲಿ ರಿಲಯನ್ಸ್‌ನ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ ಮತ್ತು ರಿಲಯನ್ಸ್ ಫೌಂಡೇಶನ್ ಮಂಡಳಿಗಳ ನಿರ್ದೇಶಕರಾದ ಅನಂತ್​ ಅಂಬಾನಿ ಅವರ ಪರಿಕಲ್ಪನೆಯಾಗಿದೆ ಮತ್ತು ಕನಸಿನ ಯೋಜನೆಯೂ ಆಗಿದೆ.

    ವಂತಾರಾ ಅತ್ಯಾಧುನಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು, ಸಂಶೋಧನೆ ಮತ್ತು ಶೈಕ್ಷಣಿಕ ಕೇಂದ್ರಗಳನ್ನು ಒಳಗೊಂಡಂತೆ ಅತ್ಯುತ್ತಮ ಗುಣಮಟ್ಟದ ಪ್ರಾಣಿ ಸಂರಕ್ಷಣೆ ಮತ್ತು ಆರೈಕೆ ಘಟಕಗಳನ್ನು ರಚಿಸುವತ್ತ ಗಮನಹರಿಸಿದೆ. ವಂತಾರಾವು ತನ್ನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸುಧಾರಿತ ಸಂಶೋಧನೆ ಮತ್ತು ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಮತ್ತು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಫಾರ್ ನೇಚರ್ (WWF) ನಂತಹ ಸಂಸ್ಥೆಗಳೊಂದಿಗೆ ಸಹಯೋಗವನ್ನು ಸಂಯೋಜಿಸುವತ್ತ ಗಮನಹರಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

    ವಂತಾರಾ ಕಾರ್ಯಕ್ರಮವು ಕಳೆದ ಕೆಲವು ವರ್ಷಗಳಿಂದ 200ಕ್ಕೂ ಹೆಚ್ಚು ಆನೆಗಳು ಮತ್ತು ಸಾವಿರಾರು ಇತರ ಪ್ರಾಣಿಗಳು, ಸರೀಸೃಪಗಳು ಮತ್ತು ಪಕ್ಷಿಗಳನ್ನು ಅಸುರಕ್ಷಿತ ಪರಿಸ್ಥಿತಿಗಳಿಂದ ರಕ್ಷಿಸಿದೆ ಎಂದು ಅದು ಹೇಳಿದೆ. ಖಡ್ಗಮೃಗ, ಚಿರತೆ ಮತ್ತು ಮೊಸಳೆ ಪುನರ್ವಸತಿ ಸೇರಿದಂತೆ ಅನೇಕ ಪ್ರಾಣಿಗಳನ್ನು ಪೋಷಿಸುತ್ತಿದೆ.

    Vantara 2

    ವಂತಾರಾ ವಿದೇಶಿ ಕಾರ್ಯಾಚರಣೆಗಳು
    ಈ ವಂತಾರಾ ಕಾರ್ಯಕ್ರಮವೂ ಮೆಕ್ಸಿಕೋ, ವೆನೆಜುವೆಲಾ ಸೇರಿದಂತೆ ವಿದೇಶಗಳಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಮಧ್ಯ ಅಮೆರಿಕನ್ ಮೃಗಾಲಯದಿಂದ ಹಲವಾರು ದೊಡ್ಡ ಪ್ರಾಣಿಗಳನ್ನು ಜಾಮ್​ನಗರಕ್ಕೆ ತರಲಾಗಿದೆ. ಎಲ್ಲ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕಾರ್ಯಾಚರಣೆಗಳು ಭಾರತ ಮತ್ತು ಅಂತಾರಾಷ್ಟ್ರೀಯ ಕಟ್ಟುನಿಟ್ಟಾದ ಕಾನೂನು ಮತ್ತು ನಿಯಂತ್ರಕ ಚೌಕಟ್ಟುಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

    ವಂತಾರಾ ಬಗ್ಗೆ ಅನಂತ್​ ಅಂಬಾನಿ ಹೇಳಿದ್ದೇನು?
    ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಅನಂತ್​ ಅಂಬಾನಿ, ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ರಕ್ಷಿಸಲು ನಾವು ಗಮನಹರಿಸಿದ್ದೇವೆ. ನಾವು ಪ್ರಮುಖ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಮತ್ತು ಪ್ರಾಣಿಗಳ ತುರ್ತು ಬೆದರಿಕೆಗಳನ್ನು ಪರಿಹರಿಸಲು ಬಯಸುತ್ತೇವೆ ಮತ್ತು ವಂತಾರಾವನ್ನು ಪ್ರಮುಖ ಸಂರಕ್ಷಣಾ ಕಾರ್ಯಕ್ರಮವಾಗಿ ಸ್ಥಾಪಿಸಲು ಬಯಸುತ್ತೇವೆ. ಈ ಮಿಷನ್​ಗೆ ಭಾರತ ಮತ್ತು ವಿಶ್ವದ ಕೆಲವು ಉನ್ನತ ಪ್ರಾಣಿಶಾಸ್ತ್ರಜ್ಞರು ಮತ್ತು ವೈದ್ಯಕೀಯ ತಜ್ಞರು ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.

    ಮತ್ತಷ್ಟು ಮಾಹಿತಿ ನೀಡಿದ ಅನಂತ್​ ಅಂಬಾನಿ, ವಂತಾರಾವು ಭಾರತದ ಎಲ್ಲ 150ಕ್ಕೂ ಹೆಚ್ಚು ಮೃಗಾಲಯಗಳಲ್ಲಿ ತರಬೇತಿ, ಸಾಮರ್ಥ್ಯ ನಿರ್ಮಾಣ ಮತ್ತು ಪ್ರಾಣಿಗಳ ಆರೈಕೆ ಮೂಲಸೌಕರ್ಯವನ್ನು ಸುಧಾರಿಸಲು ಮೃಗಾಲಯ ಪ್ರಾಧಿಕಾರ ಮತ್ತು ಇತರ ಸಂಬಂಧಿತ ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ವಂತಾರಾ ಜಾಗತಿಕವಾಗಿ ಪ್ರಾಣಿಗಳ ಭರವಸೆಯ ದಾರಿದೀಪವಾಗಲಿದೆ ಮತ್ತು ಜಾಗತಿಕ ಜೀವವೈವಿಧ್ಯ ಸಂರಕ್ಷಣೆಯ ಉಪಕ್ರಮಗಳ ವಿಚಾರದಲ್ಲಿ ನಮ್ಮ ಸಂಸ್ಥೆಯು ಸದಾ ಮುಂದೆ ನಿಲ್ಲುತ್ತದೆ ಎಂದು ಹೇಳಿದರು.

    Vantara 1

    ವಂತಾರಾ ಯೋಜನೆಯನ್ನು ಸ್ಥಾಪಿಸಲು ತಮಗೆ ಪ್ರೇರೇಪಣೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅನಂತ್​ ಅಂಬಾನಿ, ವಂತಾರಾವು ಆಧುನಿಕ ವೈಜ್ಞಾನಿಕ ಮತ್ತು ತಾಂತ್ರಿಕ ವೃತ್ತಿಪರತೆಯ ಶ್ರೇಷ್ಠತೆಯೊಂದಿಗೆ ಸಹಾನುಭೂತಿಯ ಪ್ರಾಚೀನ ನೈತಿಕ ಮೌಲ್ಯದ ಸಂಯೋಜನೆಯಾಗಿದೆ. ನಾನು ಪ್ರಾಣಿಗಳ ಆರೈಕೆಯನ್ನು ಸರ್ವಶಕ್ತ ಮತ್ತು ಮಾನವೀಯತೆಯ ಸೇವೆಯಾಗಿ ನೋಡುತ್ತೇನೆ ಎಂದರು.

    ಅಂದಹಾಗೆ ವಂತಾರಾವು ಆನೆಗಳ ಶಿಬಿರವನ್ನು ಹೊಂದಿದೆ ಮತ್ತು ಸಿಂಹಗಳು, ಹುಲಿಗಳು, ಮೊಸಳೆಗಳು, ಚಿರತೆಗಳು ಸೇರಿದಂತೆ ಹಲವಾರು ದೊಡ್ಡ ಮತ್ತು ಸಣ್ಣ ಜಾತಿಯ ಪ್ರಾಣಿಗಳಿಗೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದೆ. (ಏಜೆನ್ಸೀಸ್​)

    ಅಮಿತಾಭ್​ ಫಾಲೋ ಮಾಡ್ತಿರೋ ಏಕೈಕ ವ್ಯಕ್ತಿ ಯಾರು? ಸೆಲೆಬ್ರಿಟಿ, ಸಂಬಂಧಿಯೂ ಅಲ್ಲ, ಹಾಗಾದ್ರೆ ಮತ್ಯಾರು?

    ಪ್ರಶಾಂತ್​ ನೀಲ್​ vs ಶಾರುಖ್​ ಖಾನ್​! ಇದು ನಿಜವಾದ ಫೈಟ್​, ಯಾರು ಗೆಲ್ತಾರೆ ಗೆಸ್​ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts