ಮದುವೆ ಕಾರಣ ನೀಡಿ ಆರ್‌ಸಿಬಿ ತಂಡದ ಆರಂಭಿಕ ಪಂದ್ಯಕ್ಕೆ ಈ ಸ್ಪಿನ್ನರ್ ಗೈರು

jampa rcb web
Published on

ಬೆಂಗಳೂರು: ಆಸ್ಟ್ರೇಲಿಯಾದ ಲೆಗ್‌ಸ್ಪಿನ್ನರ್ ಆಡಂ ಜಂಪಾ ಮದುವೆಯ ಕಾರಣದಿಂದಾಗಿ ಐಪಿಎಲ್ 14ನೇ ಆವೃತ್ತಿಯಲ್ಲಿ ಏಪ್ರಿಲ್ 9ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡ ಆಡಲಿರುವ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಬುಧವಾರ ಈ ವಿಷಯವನ್ನು ತಿಳಿಸಿದ್ದಾರೆ.

28 ವರ್ಷದ ಆಡಂ ಜಂಪಾ ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಿಂದ ಆರ್‌ಸಿಬಿ ತಂಡದ ಭಾಗವಾಗಿದ್ದು, ಕಳೆದ ವರ್ಷ ಆಡಿದ 3 ಪಂಧ್ಯಗಳಲ್ಲಿ 2 ವಿಕೆಟ್ ಕಬಳಿಸಿದ್ದರು. ಜಂಪಾ ಶೀಘ್ರದಲ್ಲೇ ಗೆಳತಿ ಹರಿಯೆಟ್ ಪಲ್ಮರ್‌ರನ್ನು ವರಿಸಲಿದ್ದಾರೆ. ಕಳೆದ ವರ್ಷ ನಡೆಯಬೇಕಾಗಿದ್ದ ಜಂಪಾ ಮದುವೆ ಕರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.

ಆರ್‌ಸಿಬಿ ತಂಡದ ತರಬೇತಿ ಶಿಬಿರ ಮಾರ್ಚ್ 29ರಂದು ಚೆನ್ನೈನಲ್ಲಿ ಆರಂಭಗೊಳ್ಳಲಿದೆ. ಭಾರತ-ಇಂಗ್ಲೆಂಡ್ ಏಕದಿನ ಸರಣಿ ಮುಕ್ತಾಯಗೊಂಡ ಮರುದಿನ ಶಿಬಿರ ಆರಂಭಗೊಳ್ಳಲಿದ್ದು, ನಾಯಕ ವಿರಾಟ್ ಕೊಹ್ಲಿ ಪುಣೆಯ ಬಯೋ-ಬಬಲ್‌ನಿಂದ ನೇರವಾಗಿ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದು, 7 ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದಿಲ್ಲ. ಇತರ ಆಟಗಾರರು ಹಂತ ಹಂತವಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್ ಮಾರ್ಚ್ 31ರ ನಂತರ, ನ್ಯೂಜಿಲೆಂಡ್‌ನ ಫಿನ್ ಅಲೆನ್ ಏಪ್ರಿಲ್ 1ರ ಬಳಿಕ ಮತ್ತು ಎಬಿ ಡಿವಿಲಿಯರ್ಸ್‌ ಮಾರ್ಚ್ 28ರಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net