ಟೆನಿಸ್ ತಾರೆ ಜೋಕೊವಿಕ್‌ರನ್ನು ಹನಿಟ್ರ್ಯಾಪ್ ಮಾಡಲು ರೂಪದರ್ಶಿಗೆ ಭಾರಿ ಮೊತ್ತದ ಆಮಿಷ!

djoko honey web
Published on

ಲಂಡನ್: ವಿಶ್ವ ನಂ. 1 ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೋಕೊವಿಕ್ ಅವರನ್ನು ಹನಿಟ್ರ್ಯಾಪ್ ಮಾಡಿಸಲು ವ್ಯಕ್ತಿಯೊಬ್ಬ ತಮಗೆ 52 ಲಕ್ಷ ರೂಪಾಯಿ (60 ಸಾವಿರ ಯುರೋ) ಆಮಿಷ ಒಡ್ಡಿದ್ದ ಎಂದು ಸೆರ್ಬಿಯಾದ ರೂಪದರ್ಶಿ ನತಾಲಿಜ ಸೆಕಿಕ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

‘ವ್ಯಕ್ತಿಯೊಬ್ಬ ನನ್ನನ್ನು ಸಂಪರ್ಕಿಸಿ, ಜೋಕೊವಿಕ್ ಜತೆಗೆ ಅಶ್ಲೀಲವಾಗಿ ವರ್ತಿಸಿ ಅದನ್ನು ವಿಡಿಯೋ ಮಾಡಿ ತಂದುಕೊಡುವಂತೆ ಆಮಿಷ ಒಡ್ಡಿದ್ದ. ಅದಕ್ಕಾಗಿ 60 ಸಾವಿರ ಯುರೋ ಜತೆಗೆ ನಾನು ಬಯಸಿದ ಸ್ಥಳಕ್ಕೆ ಪ್ರವಾಸಕ್ಕೆ ಹೋಗುವ ಆರ್ ನೀಡಿದ್ದ. ಆತ ಜೋಕ್ ಮಾಡುತ್ತಿದ್ದಾನೆ ಎಂದು ನಾನು ತಿಳಿದಿದ್ದೆ. ಆದರೆ ಆತ ಗಂಭೀರವಾಗಿದ್ದ. ಅದರಿಂದ ನನಗೆ ಆತನ ಮೇಲೆ ಹಲ್ಲೆ ಮಾಡುವಷ್ಟು ಸಿಟ್ಟು ಬಂದಿತ್ತು. ಆದರೆ ನಾವು ಸಾರ್ವಜನಿಕ ಸ್ಥಳದಲ್ಲಿದ್ದ ಕಾರಣ ನಾನು ನನ್ನನ್ನು ನಿಯಂತ್ರಿಸಿಕೊಂಡೆ. ಬಳಿಕ ಕೂಡಲೆ ಅಲ್ಲಿಂದ ನಿರ್ಗಮಿಸಿದೆ’ ಎಂದು ನತಾಲಿಜ ಸೆಕಿಕ್ ಆರೋಪಿಸಿದ್ದಾರೆ.

ಜೋಕೊವಿಕ್ ಮೇಲೆ ಅಪಾರವಾದ ಅಭಿಮಾನ ಇಟ್ಟುಕೊಂಡಿರುವ ನತಾಲಿಜ ಸೆಕಿಕ್, ‘ಆತನಿಗೆ ಆ ಕೆಲಸ ಮಾಡಲು ಬೇಕಾದ ಹುಡುಗಿ ಸಿಗದಿರಲಿ ಎಂದು ಆಶಿಸುವೆ. ಯಾಕೆಂದರೆ ಜೋಕೊವಿಕ್ ಜತೆಗೆ ಆ ರೀತಿಯ ವರ್ತನೆ ಸರಿಯಲ್ಲ. ಜೋಕೊವಿಕ್ ನಮ್ಮ ರಾಯಭಾರಿ, ಆದರ್ಶ ವ್ಯಕ್ತಿ, ಕುಟುಂಬ ವ್ಯಕ್ತಿ. ಹಣಕ್ಕಾಗಿ ಅವರೊಂದಿಗೆ ಅಶ್ಲೀಲವಾಗಿ ವರ್ತಿಸುವುದು ಅಥವಾ ಅಂಥ ಪ್ರಯತ್ನವನ್ನು ಮಾಡುವುದು ಕೂಡ ಸರಿಯಲ್ಲ’ ಎಂದಿದ್ದಾರೆ.

ದೀರ್ಘಕಾಲದ ಗೆಳತಿ ಜೆಲೆನಾ ಅವರನ್ನು 7 ವರ್ಷಗಳ ಹಿಂದೆಯೇ ವಿವಾಹವಾಗಿರುವ 33 ವರ್ಷದ ಜೋಕೊವಿಕ್, ತಲಾ ಓರ್ವ ಪುತ್ರ, ಪುತ್ರಿಯನ್ನು ಹೊಂದಿದ್ದಾರೆ. ಜೋಕೊವಿಕ್ 18 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net