

ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ತನ್ನ ಹೆಸರನ್ನು ಪ್ರಸ್ತಾಪಿಸಿರುವ ಪ್ರಶಾಂತ್ ಸಂಬರಗಿ ಯಾರೆಂದು ನನಗೆ ಗೊತ್ತೇ ಇಲ್ಲ ಎಂದಿರುವ ಶಾಸಕ ಜಮೀರ್ ಅಹ್ಮದ್, ಡ್ರಗ್ಸ್ ಕೇಸ್ನಲ್ಲಿ ನನ್ನ ಕೈವಾಡ ಇರುವುದು ಸಾಬೀತು ಮಾಡಲಿ. ಒಂದು ವೇಳೆ ಆರೋಪ ಸಾಬೀತಾದ್ರೆ ರಾಜ್ಯದಲ್ಲಿರುವ ನನ್ನ ಎಲ್ಲ ಆಸ್ತಿಯನ್ನೂ ಸರ್ಕಾರಕ್ಕೇ ಬರೆದುಕೊಡುವೆ ಎಂದು ಸವಾಲು ಹಾಕಿದ್ದಾರೆ.
ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್ ಫಾಸಿಲ್, ಡ್ರಗ್ಸ್ ಕೇಸ್ನ ಆರೋಪಿಗಳ ಜೊತೆ ಲಿಂಕ್ ಇಟ್ಟುಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಈತನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಫಾಸಿಲ್ ತಲೆಮರೆಸಿಕೊಂಡಿದ್ದಾನೆ.
ಈ ಹಿಂದೆ ಜಮೀರ್ ಅಹ್ಮದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶೇಖ್ ಫಾಸಿಲ್, ಶಾಸಕರ ಜತೆ ತೆಗೆಸಿಕೊಂಡಿದ್ದ ಫೋಟೋಗಳು ಇದೀಗ ವೈರಲ್ ಆಗಿವೆ. ಅಲ್ಲದೆ ಶ್ರೀಲಂಕಾದ ಕ್ಯಾಸಿನೋಗೆ ಜಮೀರ್ ಅಹ್ಮದ್ ಕೂಡ ಹೋಗಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದರು. ಈ ಬಗ್ಗೆ ದಾಖಲೆಗಳು ಬೇಕಿದ್ರೆ ನೀಡ್ತೇನೆ ಎಂದಿದ್ದರು. ಈ ಆರೋಪ ಮಾಡಿದ ಪ್ರಶಾಂತ್ ಸಂಬರಗಿ ವಿರುದ್ಧ ಜಮೀರ್ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಡ್ರಗ್ಸ್ ಮಾಫಿಯಾದಲ್ಲಿ ನನ್ನ ಕೈವಾಡ ಇರುವುದು ಸಾಬೀತಾದ್ರೆ ತನ್ನೆಲ್ಲ ಆಸ್ತಿಯನ್ನೇ ಕೊಡುವುದಾಗಿ ಸವಾಲು ಹಾಕಿದ್ದಾರೆ.