

ಬೆಂಗಳೂರು: ಡ್ರಗ್ಸ್ ಕೇಸ್ ತನಿಖೆಗೆ ಇಡಿ(ಜಾರಿ ನಿರ್ದೇಶನಾಲಯ) ಎಂಟ್ರಿಕೊಟ್ಟ ಬೆನ್ನಲ್ಲೇ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮತ್ತು ಖಾಸಗಿ ಬ್ಯಾಂಕಿನ ಅಧಿಕಾರಿಗಳು ಕೂಡ ಸಿಸಿಬಿ ಕಚೇರಿಗೆ ಆಗಮಿಸಿದ್ದು, ಸಿಸಿಬಿ ಹೈವೋಲ್ಟೇಜ್ ಕೇಂದ್ರವಾಗಿದೆ.
ಶ್ರೀಲಂಕಾದ ಕ್ಯಾಸಿನೋದಲ್ಲಿ ಸಾವಿರಾರು ಕೋಟಿ ಅಕ್ರಮ ಹಣ ವರ್ಗಾವಣೆ ಆಗಿರೋದು ಪತ್ತೆಯಾಗಿದೆ. ಕ್ಯಾಸಿನೋಗೆ ಹೋಗಿ ಬರುತ್ತಿದ್ದವರ ಬೆನ್ನಹಿಂದೆ ಜಾರಿ ನಿರ್ದೇಶನಾಲಯ ಬಿದ್ದಿದ್ದು, ಶ್ರೀಲಂಕಾದ ಕ್ಯಾಸಿನೋ ಕೋಟಿ ಕೋಟಿ ಹಣ ಸುರಿದವರಲ್ಲೀಗ ನಡುಕ ಶುರುವಾಗಿದೆ. ಡ್ರಗ್ಸ್ ಕೇಸ್ನ ಆರೋಪಿಗಳ ಜೊತೆ ಲಿಂಕ್ ಇಟ್ಟುಕೊಂಡಿರುವ ಶೇಖ್ ಫಾಸಿಲ್, ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದ ವೇಳೆ ಫಾಸಿಲ್ ಪರಾರಿಯಾಗಿದ್ದ. ಫಾಸಿಲ್ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ ಶಾಸಕರಿಗೂ ಇದೀಗ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಆರೋಪಿ ಶೇಖ್ ಫಾಸಿಲ್, ಶಾಸಕ ಜಮೀರ್ ಅಹ್ಮದ್ರ ಆಪ್ತ. ಆತನ ಮೂಲಕವೇ ಜಮೀರ್ಗೆ ಸಂಕಷ್ಟ ಎದುರಾಗಲಿದೆ ಎಂಬ ಮಾತು ಕೇಳಿಬರುತ್ತಿವೆ. ಕೆಲ ರಾಜಕಾರಣಿಗಳು, ಬಿಸಿನೆಸ್ ಮೆನ್ಗಳು ಮತ್ತು ನಟಿ-ನಟಿಯರು ಪಾರ್ಟಿ ಹೆಸರಲ್ಲಿ ಕ್ಯಾಸಿನೋದಲ್ಲಿ ಸೇರುತ್ತಿದ್ದರು. ಅಲ್ಲಿ ಅಕ್ರಮ ಹಣ ಸುರಿದು ಮಜಾ ಮಾಡುತ್ತಿದ್ದರು ಎಂಬ ಆರೋಪ ಇದೆ. ಸಾವಿರಾರು ಕೋಟಿ ಅಕ್ರಮ ಹಣ ವರ್ಗಾವಣೆ ಆಗಿರೋದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಅಕ್ರಮ ಹಣ ವರ್ಗಾವಣೆ ಬಗ್ಗೆ ಇಡಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆಯುತ್ತಿದ್ದು, ಡ್ರಗ್ಸ್ ಕೇಸ್ನಲ್ಲಿ ಬಂಧಿತರಾಗಿರುವ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಿರುವ ಮಾಹಿತಿ ಹೊತ್ತ ಫೈಲ್ ಅನ್ನು ಫಾರೆನ್ಸಿಕ್ ಅಧಿಕಾರಿಗಳು ಸಿಸಿಬಿ ಕಚೇರಿಗೆ ತಂದಿದ್ದಾರೆ.
ಶ್ರೀಲಂಕಾದ ಕ್ಯಾಸಿನೋಗೆ ಜಮೀರ್ ಅಹ್ಮದ್ ಕೂಡ ಹೋಗಿದ್ದರು ಎಂದು ಸಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದರು. ಈ ಬಗ್ಗೆ ದಾಖಲೆಗಳು ಬೇಕಿದ್ರೆ ನೀಡ್ತೇನೆ ಎಂದಿದ್ದರು. ಇದೀಗ ಡ್ರಗ್ಸ್ ಆರೋಪಿಗಳಿಗೆ ಕ್ಯಾಸಿನೋ ಲಿಂಕ್ ಇದ್ದ ಬಗ್ಗೆ ಸಿಸಿಬಿಯಿಂದ ಇಡಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.