

ನವದೆಹಲಿ: ಟೀಮ್ ಇಂಡಿಯಾ ಮತ್ತು ಆರ್ಸಿಬಿ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್, ಸ್ಪಿನ್ ಬೌಲರ್ಗಳಿಗೆಲ್ಲ ವಿಶೇಷವಾದ ಟಿಪ್ಸ್ ಒಂದನ್ನು ನೀಡಿದ್ದಾರೆ. ಸ್ಪಿನ್ ಬೌಲಿಂಗ್ ಮಾಡುವ ವಿಶೇಷ ಕಲೆಯನ್ನೇನಾದರೂ ಚಾಹಲ್ ಹೇಳಿಕೊಟ್ಟಿದ್ದಾರೆ ಎಂದು ನೀವು ತಿಳಿದಿದ್ದರೆ ಅದು ನಿಜವಲ್ಲ. ಬದಲಾಗಿ, ಸ್ಪಿನ್ ಬೌಲರ್ಗಳೆಲ್ಲ ಮದುವೆಯಾಗಬೇಕೆಂದು ಚಾಹಲ್ ಸಲಹೆ ನೀಡಿದ್ದಾರೆ! ಯಾಕೆ ಗೊತ್ತೇ?
ಪತ್ನಿ ಧನಶ್ರೀ ವರ್ಮ ಜತೆಗಿನ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಚಾಹಲ್, ನನ್ನ ಪ್ರಕಾರ ಎಲ್ಲ ಸ್ಪಿನ್ನರ್ಗಳು ಮದುವೆಯಾಗಬೇಕು ಎಂದಿದ್ದಾರೆ. ಆಗ ಪ್ರತಿ ಪ್ರಶ್ನೆ ಎಸೆದಿರುವ ಧನಶ್ರೀ, ಮದುವೆ ಓಕೆ, ಆದರೆ ಎಲ್ಲ ಸ್ಪಿನ್ನರ್ಗಳು ಯಾಕೆ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಚಾಹಲ್, ಯಾಕೆಂದರೆ ನಾನು ಗೂಗ್ಲಿ ಬೌಲಿಂಗ್ ಮಾಡುವುದನ್ನು ಪತ್ನಿಯಿಂದ ಕಲಿತಿದ್ದೇನೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ಮೇಕಿಂಗ್ ಆ್ಯಪ್ ಒಂದರಲ್ಲಿ ತಮ್ಮ ಪ್ರವೇಶವನ್ನು ಸಾರುವ ಸಲುವಾಗಿ ಚಾಹಲ್ ಈ ವಿಡಿಯೋ ಮಾಡಿದ್ದರು.
ಈ ನಡುವೆ ಅಫ್ಘಾನಿಸ್ತಾನ ಹಾಗೂ ಸನ್ರೈಸರ್ಸ್ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್, ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ನನಗೆ ಮದುವೆಯಾಗದೆಯೂ ಗೂಗ್ಲಿ ಬೌಲಿಂಗ್ ಮಾಡುವುದು ಗೊತ್ತಿದೆ ಎಂದು ತಮಾಷೆ ಮಾಡಿದ್ದಾರೆ. ಚಾಹಲ್ 2020ರ ಡಿಸೆಂಬರ್ನಲ್ಲಿ ಧನಶ್ರೀ ಅವರನ್ನು ವಿವಾಹವಾಗಿದ್ದರು. ಕೋರಿಯೋಗ್ರಾಫರ್ ಆಗಿರುವ ಧನಶ್ರೀ, ವಿವಿಧ ಡ್ಯಾನ್ಸ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದುಮಾಡುತ್ತಿರುತ್ತಾರೆ.