ಸಿನಿಮಾ ಕಥೆಯಂತಿದೆ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗನ ಲವ್ ಸ್ಟೋರಿ!

pooran web
Published on

ನವದೆಹಲಿ: ಪ್ರೀತಿಯ ತಳಹದಿ ಇರುವುದೇ ನಂಬಿಕೆಯಲ್ಲಿ. ಅಂಥ ನಂಬಿಕೆ ಇದ್ದಾಗ ಪ್ರೀತಿ ಗಟ್ಟಿಯಾಗಿರುತ್ತದೆ. ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಜೀವನದಲ್ಲೂ ಇಂಥದ್ದೇ ಪ್ರೀತಿಯ ಕಥೆ ಇದೆ. ಸಿನಿಮಾ ಕಥೆಯಂತೆ ಕಾಣುವ ನಿಕೋಲಸ್ ಪೂರನ್ ಲವ್ ಸ್ಟೋರಿಗೆ ಇತ್ತೀಚೆಗೆ ದಾಂಪತ್ಯ ಜೀವನದ ಬಡ್ತಿಯೂ ಲಭಿಸಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ದೀರ್ಘಕಾಲದ ಪ್ರೇಯಸಿ ಅಲಿಸ್ಸಾ ಕ್ಯಾಥರಿನಾ ಮಿಗುಯೆಲ್ ಜತೆಗೆ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ವೇಳೆ ಅವರ ಪ್ರೇಮಕಥೆಯೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.

8 ವರ್ಷಗಳ ಹಿಂದೆ ಪೂರನ್ ಮತ್ತು ಮಿಗುಯೆಲ್ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಈ ನಡುವೆ 2015ರ ಜನವರಿಯಲ್ಲಿ ಪೂರನ್ ಭೀಕರ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಕ್ಕೊಳಗಾದರು. ಎರಡೂ ಮೊಣಕಾಲಿಗೆ ಆದ ಗಾಯದಿಂದಾಗಿ ನಡೆಯುವುದು ಅಸಾಧ್ಯವಾಗಿತ್ತು. ಆಗ ಅವರಿಗೆ ಆಸರೆಯಾಗಿದ್ದು ವೀಲ್‌ಚೇರ್ ಮತ್ತು ಗೆಳತಿ ಮಿಗುಯೆಲ್. ಇನ್ನೇನು ಪೂರನ್ ಕ್ರಿಕೆಟ್ ಜೀವನವೇ ಮುಕ್ತಾಯವಾಯಿತು ಎಂಬ ಭೀತಿಯ ನಡುವೆಯೂ ಮಿಗುಯೆಲ್, ಗೆಳೆಯನ ಕೈಬಿಡಲಿಲ್ಲ.

18 ತಿಂಗಳ ಕಾಲ ಪೂರನ್ ನಡೆಸಿದ ದಿಟ್ಟ ಹೋರಾಟದಿಂದ ಕ್ರಿಕೆಟ್ ಮೈದಾನಕ್ಕೆ ಪುನರಾಗಮನ ಸಾರಲು ಮಿಗುಯೆಲ್ ಬೆಂಬಲವಾಗಿ ನಿಂತಿದ್ದರು. 2017ರಲ್ಲಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ ಬಳಿಕ ಪೂರನ್ ವೃತ್ತಿಜೀವನ ಪ್ರಗತಿಯ ಹಾದಿಯಲ್ಲಿ ಸಾಗಿತು. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದಾಗಿ 2017ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಮೂಲ ಬೆಲೆ 30 ಲಕ್ಷ ರೂ.ಗೆ ಸೇರಿಕೊಂಡರು. ಆ ವರ್ಷ ಪಾಕಿಸ್ತಾನ ಸೂಪರ್ ಲೀಗ್‌ನಲ್ಲೂ ಇಸ್ಲಾಮಾಬಾದ್ ಯುನೈಟೆಡ್ ಪರ ಮಿಂಚಿದ್ದರು. ಬಳಿಕ 2019ರಲ್ಲಿ ಪಂಜಾಬ್ ತಂಡಕ್ಕೆ ಬರೋಬ್ಬರಿ 4.2 ಕೋಟಿ ರೂ.ಗೆ ಸೇರ್ಪಡೆಗೊಂಡು ಐಪಿಎಲ್‌ಗೆ ಮರಳಿದರು. 2020ರಲ್ಲಿ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಅವರು 25 ಸಿಕ್ಸರ್ ಸಿಡಿಸಿ ಆರ್ಭಟಿಸಿದ್ದರು.

ಕಳೆದ ವರ್ಷ ಐಪಿಎಲ್ ಬೆನ್ನಲ್ಲೇ ನವೆಂಬರ್‌ನಲ್ಲಿ ಮಿಗುಯೆಲ್ ಜತೆಗೆ ಪೂರನ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷ ಐಪಿಎಲ್ ಮೊಟಕುಗೊಂಡ ಬೆನ್ನಲ್ಲೇ ಈ ಅವಕಾಶವನ್ನು ಬಳಸಿಕೊಂಡ ಪೂರನ್ ತವರಿಗೆ ಮರಳಿದ ಕೂಡಲೆ ಮಿಗುಯೆಲ್ ಅವರನ್ನು ವಿವಾಹವಾಗಿದ್ದರು. ‘ಜೀಸಸ್ ನನಗೆ ಜೀವನದಲ್ಲಿ ಹಲವನ್ನು ನೀಡಿದ್ದಾರೆ. ಆದರೆ ಕ್ಯಾಥರಿನಾ ಮಿಗುಯೆಲ್ ಜೀವನದಲ್ಲಿ ನಿನ್ನನ್ನು ಪಡೆಯುವುದಕ್ಕಿಂತ ಮಿಗಿಲಾದುದು ಬೇರೇನೂ ಇಲ್ಲ’ ಎನ್ನುವ ಮೂಲಕ 25 ವರ್ಷದ ಪೂರನ್ ವಿವಾಹವನ್ನು ಪ್ರಕಟಿಸಿದ್ದರು. ವೆಸ್ಟ್ ಇಂಡೀಸ್ ಪರ ಇದುವರೆಗೆ 25 ಏಕದಿನ ಮತ್ತು 20 ಟಿ20 ಪಂದ್ಯ ಆಡಿರುವ ಪೂರನ್ ಭವಿಷ್ಯದ ನಾಯಕ ಎಂದೂ ಗುರುತಿಸಲ್ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net