

ಹರಾರೆ: ಪ್ರಸ್ತುತ ಜಿಂಬಾಬ್ವೆ ಮತ್ತು ಟೀಮ್ ಇಂಡಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಹರಾರೆಯಲ್ಲಿ ನಡೆಯುತ್ತಿದ್ದು, ಶುಭಾರಂಭ ಪಂದ್ಯದಲ್ಲಿಯೇ ಜಿಂಬಾಬ್ವೆ ಮುಂದೆ ಭಾರತ ಸೋಲಿಗೆ ಶರಣಾಯಿತು. ಆದರೆ, ಎರಡನೇ ಮ್ಯಾಚ್ನಲ್ಲಿ 100 ರನ್ಗಳ ಅಂತರದಿಂದ ರೋಚಕ ಜಯ ಸಾಧಿಸಿದ ಶುಭಮನ್ ಗಿಲ್ ಪಡೆ, ಇದೀಗ ಉಳಿದ ಮೂರು ಪಂದ್ಯಗಳನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: ಸೋನೆ ಮಳೆಯಲ್ಲೂ ಪುರಿ ಜಗನ್ನಾಥನ ರಥ ವೈಭವ
ಈ ಪಂದ್ಯದಲ್ಲಿ ಭಾರತ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಓಪನಿಂಗ್ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮ, ತಂಡಕ್ಕೆ 100 ರನ್ಗಳ ಅದ್ಭುತ ಕೊಡುಗೆ ನೀಡಿ, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಟಿ20 ಸರಣಿ ಮೂಲಕ ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅಭಿಷೇಕ್, ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿಯೇ ಡಕ್ ಔಟ್ ಆಗಿ ಪೆವಿಲಿಯನ್ನತ್ತ ಸಾಗಿದರು. ಈ ವಿಷಯದಿಂದ ಅತೀವ ಬೇಸರಕ್ಕೆ ಒಳಗಾದ ಯುವ ಬ್ಯಾಟರ್, ಮೌನದಿಂದಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತ್ತಿದ್ದರು.
ತಮ್ಮ ಮೇಲೆ ಟೀಮ್ ಮ್ಯಾನೇಜ್ಮೆಂಟ್ ಮತ್ತು ಮಾಜಿ ಕ್ರಿಕೆಟಿಗರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಭಿಷೇಕ್ ಬೇಸರ ಹೊಂದಿದ್ದರು. ತಂಡದ ಸಹ ಆಟಗಾರರು ಅಭಿಗೆ ಬೆನ್ನುತಟ್ಟಿ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿ ಎಂದು ಹೇಳುವ ಮೂಲಕ ಹುರಿದುಂಬಿಸಿದ್ದರು. ಅದರಂತೆಯೇ ಎರಡನೇ ಪಂದ್ಯದಲ್ಲಿ ಅಬ್ಬರಿಸಿದ ಅಭಿಷೇಕ್, ಕೇವಲ 46 ಎಸೆತಗಳಲ್ಲಿ 100 ರನ್ ಸಿಡಿಸಿ, ಆಕರ್ಷಕ ಶತಕ ಬಾರಿಸಿದರು. ತಂಡದ ಗೆಲುವಿಗೆ ಕಾರಣರಾದ ಯುವ ಬ್ಯಾಟರ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಅಪಾರ ಅಭಿನಂದನೆಗಳು ವ್ಯಕ್ತವಾಯಿತು.
ಇದನ್ನೂ ಓದಿ: ಇವರು ನಮ್ಮವರು ಎಂದೆನಿಸಿದಾಗ ಅವರು ಭಾರವಾಗುವುದೇ ಇಲ್ಲ
ಎರಡನೇ ಪಂದ್ಯದಲ್ಲೇ ದಾಖಲೆಯ ಶತಕದೊಂದಿಗೆ ಎಲ್ಲರ ಗಮನ ಸೆಳೆದ ಅಭಿಷೇಕ್, ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೆಂಚುರಿ ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆದರು. ಈ ಸಮಯದಲ್ಲಿ ಮನಬಿಚ್ಚಿ ಮಾತನಾಡಿದ ಅಭಿಷೇಕ್, "ಮೊದಲ ಪಂದ್ಯದಲ್ಲಿ ನಾನು ಡಕ್ ಔಟ್ ಆದಾಗ ಖುಷಿಪಟ್ಟವರು ಯುವರಾಜ್ ಸಿಂಗ್. ಈ ವಿಷಯಕ್ಕೆ ಎಲ್ಲರೂ ನನ್ನಂತೆ ಬೇಸರದಿಂದಲೇ ವರ್ತಿಸಿದರು. ಆದ್ರೆ, ಯುವಿ ಮಾತ್ರ ಸಂತಸದಿಂದ ಇದೇ ಶುಭಾರಂಭ ಎಂದು ನನಗೆ ತಿಳಿಸಿದರು" ಎಂದರು.
"ಇದು ಬೆಸ್ಟ್ ಸ್ಟಾರ್ಟ್ ಎಂದು ಹೇಳಿದರು ಅಷ್ಟೇ. ಇದರಿಂದ ನನಗೆ ಮತ್ತಷ್ಟು ಧೈರ್ಯ ಬಂದಿತು. ನನ್ನ ಕುಟುಂಬದವರಂತೆಯೇ ಅವರು ಕೂಡ ತುಂಬಾ ಸಂತೋಷ ಮತ್ತು ಹೆಮ್ಮೆಪಡುತ್ತಾರೆ. ಇವತ್ತು ನಾನು ಏನಾಗಿದ್ದೀನೋ ಅದೆಕ್ಕೆಲ್ಲಾ ಯುವಿ ಅವರೇ ಕಾರಣ. ಇಲ್ಲಿ ನನ್ನ ಶ್ರಮ ಎಷ್ಟು ಪ್ರಮಾಣದಲ್ಲಿ ಇದೆಯೋ ಅವರದ್ದು ಅಷ್ಟೇ ಇದೆ. ನಿನ್ನ ಇನ್ನಿಂಗ್ಸ್ ನೋಡಿ ತುಂಬಾ ಹೆಮ್ಮೆಯಾಯಿತು. ಅದಕ್ಕೆ ನೀನು ಅರ್ಹ. ಇಂತಹ ಅದ್ಭುತ ಇನ್ನಿಂಗ್ಸ್ಗೆ ಇದೇ ಮೊದಲ ಹೆಜ್ಜೆ ಎಂದು ಯುವರಾಜ್ ನನಗೆ ದೂರವಾಣಿ ಕರೆಯಲ್ಲಿ ಅಭಿನಂದಿಸಿದರು" ಎಂದು ಅಭಿಷೇಕ್ ಹೇಳಿದ್ದಾರೆ,(ಏಜೆನ್ಸೀಸ್).