

ಸಾಧುವಿನ ಪ್ರಶ್ನೆಯಿಂದ ಕುಪಿತಗೊಂಡ ಬಾಲಕಿ ಹೇಳುತ್ತಾಳೆ: ಈ ಹುಡುಗ ಅನ್ಯನಲ್ಲ ಖಾಸಾ ನನ್ನ ಒಡಹುಟ್ಟಿದ ತಮ್ಮ. ಅಂದಮೇಲೆ ಆಯಾಸದ ಪ್ರಶ್ನೆ ಎಲ್ಲಿಂದ ಬರುತ್ತದೆ? ನಮ್ಮವರು ಎಂದ ಮೇಲೆ ಅವರು ನಮಗೆ ಎಂದಾದರೂ ಹೊರೆ ಭಾರವಾಗುವುದುಂಟೆ? ನಿಮಗೆ ಇಷ್ಟು ತಿಳಿಯದೆ? ಬಾಲಕಿಯ ಮಾತಿಗೆ ಸಾಧುವಿನ ಬಳಿ ಉತ್ತರವಿಲ್ಲವಾಯಿತು.
ಹೌದು! ಬಾಲಕಿಯ ಮಾತಿನಲ್ಲಿ ದೊಡ್ಡ ಸಂದೇಶವಿತ್ತು. ಯಾರಾದರೂ ನಮ್ಮವರು ಎಂದಾದಾಗ ಅವರೆಂದೂ ನಮಗೆ ಹೊರೆ, ಭಾರವಾಗುವುದೇ ಇಲ್ಲ. ಈ ಸತ್ಯವನ್ನೇ ಕವಿ ಹೇಳುತ್ತಾನೆ: ಬಳ್ಳಿಗೆ ಕಾಯಿ ಭಾರವೇ? ಆದುದರಿಂದಲೇ ಎಂತಹ ಬಡಕಲು ಬಳ್ಳಿಗೂ ಭಾರವಾದ ಕಾಯಿಯೂ ಭಾರವೆಂದೆನಿಸುವುದೇ ಇಲ್ಲ. ಅಂತೆಯೇ ಹೆತ್ತ ತಾಯಿಗೆ ಮಕ್ಕಳು ಭಾರವೆಂದೆನಿಸುವುದೇ ಇಲ್ಲ. ಆಕೆಗೆ ಅವರ ಮಲ ಮೂತ್ರ ಹೇಸಿಗೆ ಎಂದೆನಿಸುವುದಿಲ್ಲ! ತನಗೆ ಸುಖನಿದ್ದೆಯನ್ನು ಮಾಡಲು ಬಿಡದೆ, ಅಳುತ್ತಾ ಎಚ್ಚರಿಸಿದರೂ ಬೇಸರವಾಗುವುದಿಲ್ಲ. ತನ್ನ ತಟ್ಟೆಯಲ್ಲಿದ್ದ ಅನ್ನವನ್ನು ತಿಂದರೂ ಕೋಪ ಬರುವುದಿಲ್ಲ. ಇಷ್ಟಕ್ಕೂ ಕಾರಣ ‘ನನ್ನದು ನಮ್ಮವರು’ ಎಂಬ ಯಾರೂ ಕಡಿದು ಹಾಕದ ಕರುಳ ಸಂಬಂಧ. ಅಮ್ಮ ಮಗನಿಗೆ ಹೇಳುತ್ತಾಳೆ - ಮಗು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಉತ್ತರವಾಗಿ ಮಗು ಆ ಅಮ್ಮನನ್ನು ಕೇಳುತ್ತೆ - ಅಮ್ಮ ನೀನು ನನ್ನನ್ನು ಪ್ರೀತಿಸಿದಂತೆ ಪಕ್ಕದ ಮನೆಯ ಮಗುವನ್ನು ಪ್ರೀತಿಸಬಲ್ಲೆಯಾ?.
ಅಮ್ಮ ಹೇಳುತ್ತಾಳೆ: ಖಂಡಿತವಾಗಿಯೂ ಮಗೂ. ಆದರೆ ಪಕ್ಕದ ಮನೆಯ ಮಗುವೆಂದಲ್ಲ; ನಿನ್ನ ಗೆಳೆಯನೆಂಬ ಕಾರಣಕ್ಕೆ! ಇಲ್ಲಿಯೂ ನನ್ನವರೆಂಬ ಅನುಬಂಧ ಕೆಲಸ ಮಾಡಿದೆ. ಈ ಸಂದೇಶವನ್ನೇ ಬಸವಣ್ಣನವರು ಸುಂದರವಾಗಿ ಹೀಗೆ ನೀಡಿದರು. ‘ಇವನಾರವ ಇವನಾರವನೆಂದೆಣಿಸದಿರು, ಇವ ನಮ್ಮವ ಇವ ನಮ್ಮವ ಇವನಮ್ಮ ಮನೆಯ ಮಗನೆಂದೆಣಿಸಯ್ಯ’.
ತಾತ್ಪರ್ಯ ಇಷ್ಟೆ: ಯಾರನ್ನಾದರೂ ನಮ್ಮವರನ್ನಾಗಿ ಮಾಡಿಕೊಂಡರೆ, ನಮ್ಮ ಮತ್ತು ಅವರ ನಡುವೆ ಏನೋ ಒಂದು ಅವಿನಾಭಾವ ಸಂಬಂಧ ಬೆಳೆದು ನಾವು ಅವರಿಗೆ ಹತ್ತಿರವಾಗುತ್ತೇವೆ. ಅವರು ನಮ್ಮದೇ ಭಾಗವಾದರೆ ನಮ್ಮ ಕಷ್ಟ ಬೇರೆ ಅವರ ಕಷ್ಟ ಬೇರೆ; ನಮ್ಮ ಭಾರ ಬೇರೆ ಅವರ ಭಾರ ಬೇರೆ ಎಂದೆನಿಸುವುದೇ ಇಲ್ಲ. ಬದಲಾಗಿ ಎಲ್ಲವೂ ಒಂದೇ ಎಂದೆನಿಸುತ್ತದೆ.
ಈ ಸತ್ಯವನ್ನೇ ತಿಳಿಸಿಕೊಡಲು ಐದು ಮಕ್ಕಳನ್ನು ಹೆತ್ತ ತಾಯಿಯನ್ನು ನೋಡಿಕೊಳ್ಳುವ ವಿಚಾರದಲ್ಲಿ ಈ ಐದು ಮಕ್ಕಳು ಹಿಂದೇಟು ಹಾಕುವಾಗ ಜ್ಞಾನಿಗಳೊಬ್ಬರು ಅವರಿಗೆ ತಿಳಿ ಹೇಳಿದರು : ನೀವೆಲ್ಲರೂ ಇನ್ನೊಬ್ಬ ಸಹೋದರನ ತಾಯಿಯ ಸೇವೆಯನ್ನು ಮಾಡುತ್ತಿದ್ದೇವೆ ಎಂಬ ಭಾವನೆಗಿಂತ ಬದಲಾಗಿ ನಿಮ್ಮ ನಿಮ್ಮ ತಾಯಿಯ ಸೇವೆಯನ್ನು ಮಾಡುತ್ತಿದ್ದೇವೆ ಎಂಬ ಭಾವನೆಯಿಂದ ಅಮ್ಮನ ಸೇವೆ ಮಾಡಿ. ಆಗ ನಿಮಗೆ ನಿಮ್ಮ ಅಮ್ಮ ಭಾರವೆನಿಸುವುದೇ ಇಲ್ಲ - ಎಂತಹ ಉತ್ತಮ ಸಲಹೆ!