

ಚೆನ್ನೈ: ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್, ಹೈ-ಸ್ಪೀಡ್ ಮೋಟಾರ್‌ಸೈಕಲ್ ಸವಾರಿ ಮತ್ತು ಸಾಹಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದ ಟಿಟಿಎಫ್ ವಾಸನ್, ಸಾಹಸಮಯ ರೀತಿಯಲ್ಲಿ ವೀಲಿ ಮಾಡಲು ಹೋಗಿ ಬೈಕ್ನ ನಿಯಂತ್ರಣ ಕಳೆದುಕೊಂಡ ಪರಿಣಾಮ 100 ಮೀ. ಸ್ಕಿಡ್ ಆಗಿ ಬಿದ್ದ ಘಟನೆ ಭಾನುವಾರ (ಸೆ.17) ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ಸಂಭವಿಸಿದೆ.
ಪ್ರತಿಬಾರಿ ಒಂದಲ್ಲ ಒಂದು ರೀತಿಯ ವೀಲಿ ಮೂಲಕ ಅನೇಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಯೂಟ್ಯೂಬರ್ ವಾಸನ್, ಭಾನುವಾರ ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ಸಾಗುವಾಗ ಬಹಳ ವೇಗದಲ್ಲಿ ಬೈಕ್ನ ಚಲಾಯಿಸಿದ್ದಾರೆ. ಈ ವೇಳೆ ವೀಲಿ ಮಾಡಲು ಹೋದಾಗ ಬೈಕ್ನ ನಿಯಂತ್ರಣ ತಪ್ಪಿ, 100 ಮೀ. ಉದ್ದ ಸ್ಕಿಡ್ ಆಗಿ ಬಿದ್ದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಸನ್ ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವರದಿಗಳ ಪ್ರಕಾರ, ಯೂಟ್ಯೂಬರ್ ಟಿಟಿಎಫ್ ವಾಸನ್ ಈ ಹಿಂದೆ ಹಲವು ಬಾರಿ ಟ್ರಾಫಿಕ್ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ದಂಡ ಕಟ್ಟಿದ್ದಾರೆ. ಸ್ಟಂಟ್ ವೇಳೆ ವಾಸನ್ ಹೆಲ್ಮೆಟ್ ಧರಿಸಿದ್ದರಿಂದ ಅಪಘಾತದಿಂದ ಪಾರಾಗಿದ್ದಾರೆ. ತುರ್ತು ಚಿಕಿತ್ಸೆಗಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).