ಯಾವುದೇ ಹಬ್ಬವಾದರೂ ಅದನ್ನು ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಆಚರಿಸಿದಾಗ ಖುಷಿ ದುಪ್ಪಟ್ಟು ಆಗುತ್ತದೆ. ಅದರಲ್ಲೂ ವಿಶೇಷವಾಗಿ ಗೌರಿ-ಗಣೇಶ ಹಬ್ಬ. ಏಕೆಂದರೆ, ಮೋದಕ, ಖರ್ಜಿಕಾಯಿಯಂತಹ ಸಿಹಿ ತಿನುಸುಗಳ ಜತೆಗೆ ವಿಘ್ನ ವಿನಾಶಕನ ಆರಾಧಿಸುವುದೇ ಒಂದು ಸಂಭ್ರಮ. ಸ್ಯಾಂಡಲ್‌ವುಡ್‌ನ ನಟಿಯರ ಈ ಹಬ್ಬದ ಸಡಗರ ಹೇಗಿರಲಿದೆ..? ಇಲ್ಲಿದೆ ಮಾಹಿತಿ..
ನಾಗಶ್ರೀ ಬೇಗಾರ್, ನಟಿ
ಪ್ರತಿ ಹಬ್ಬವನ್ನು ನಾವು ನಮ್ಮ ಊರು ಶೃಂಗೇರಿಯಲ್ಲೇ ಆಚರಿಸುವುದು. ನಮ್ಮ ಮನೆಯಲ್ಲಿ ಗೌರಿಯನ್ನು ಕೂರಿಸುವ ಪದ್ಧತಿ ಇದೆ ಜತೆಗೆ ತಂದೆ, ತಾಯಿ ಗಣೇಶ ವೃತಗೈದು ಪೂಜೆ ಮಾಡುತ್ತಾರೆ. ಗೌರಿ ಹಬ್ಬದ ಹಿಂದಿನ ದಿನವೇ ಮನೆಯವರೆಲ್ಲ ಸೇರಿ ಹಬ್ಬಕ್ಕೆ ತಯಾರಿ ಮಾಡುತ್ತೇವೆ. ಗೌರಿಗೆ ವಿಶೇಷವಾಗಿ ಹೋಳಿಗೆ ನೈವೇದ್ಯ, ಗಣಪತಿಗಾಗಿ ಮೋದಕ, ಚಕ್ಕುಲಿ, ಕಾಯಿ ಕಡುಬು ಹೀಗೆ ಹಲವು ಸಿಹಿ ಖಾದ್ಯಗಳನ್ನು ಮಾಡುತ್ತೇವೆ. ಪ್ರತಿ ಬಾರಿ ಹಬ್ಬಕ್ಕೆಂದು ನನಗೆ ಅಮ್ಮ ಹೊಸ ಬಟ್ಟೆ ಕೊಡಿಸುತ್ತಾರೆ. ಮಧ್ಯಾಹ್ನ ಹಬ್ಬದೂಟ ಮುಗಿಸಿ ಊರಲ್ಲಿ ಕೂರಿಸುವ ದೊಡ್ಡ ಗಣಪತಿಗಳನ್ನು ನೋಡಲು ಹೋಗುವ ಕಾರ್ಯಕ್ರಮ. ರಾತ್ರಿ ಚಂದಿರನನ್ನು ನೋಡಬಾರದು ಎಂಬ ಅಮ್ಮ ತಾಕೀತನ್ನು ಪಾಲಿಸಿ ಹುಷಾರಾಗಿ ಗಣಪತಿ ದರ್ಶನ ಮಾಡಿ ಮನೆಗೆ ಬರುತ್ತೇವೆ. ಕುಟುಂಬದವರೊಂದಿಗೆ ಸೇರಿ ಹೀಗೆ ಆಚರಿಸುವದೇ ಒಂದು ಸಂಭ್ರಮ. ಈ ಬಾರಿ ನಾನು ನಾಯಕಿಯಾಗಿರುವ ‘ಜಲಪಾತ’ ಸಿನಿಮಾ ರಿಲೀಸ್ ಆಗುತ್ತಿದೆ. ಹಬ್ಬದ ಖುಷಿ ಜತೆಗೆ ಅದೂ ಸೇರಿಕೊಂಡಿದೆ. ಅದಕ್ಕೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ.
ಶರಣ್ಯಾ ಶೆಟ್ಟಿ, ನಟಿ:
ಎಲ್ಲ ಹಬ್ಬಕ್ಕೂ ಇಡೀ ಕುಟುಂಬ ನಮ್ಮ ಮನೆಯಲ್ಲಿ ಸೇರಿ ಆಚರಿಸುವುದು ರೂಢಿ. ಆದರೆ, ಈ ಬಾರಿ ನಾನು ಸೈಮಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಎಂದು ದುಬೈಗೆ ಬಂದಿದ್ದೇನೆ. ಹೀಗಾಗಿ ಹಬ್ಬವನ್ನು ಮನೆಯವರ ಜತೆಗೆ ಆಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಬೇಸರದ ವಿಷಯ. ಇದೇ ಮೊದಲ ಬಾರಿಗೆ ಹಬ್ಬಕ್ಕೆ ನಾನು ಮನೆಯಲ್ಲಿ ಇರದಿರುವುದು. ಪಾಯಸ, ಹೋಳಿಗೆ, ವಡೆ, ಖರ್ಜಿಕಾಯಿ, ಮೋದಕ, ಚಕ್ಕುಲಿ ಜತೆಗೆ ಮಂಗಳೂರಿನ ವಿಶೇಷ ಖಾದ್ಯ ಅರಿಶಿಣದ ಎಲೆ ಕಡುಬು ಇರುತ್ತವೆ. ಎಲ್ಲರೂ ಒಟ್ಟಿಗೆ ಸೇರಿ ಬಾಳೆ ಎಲೆ ಊಟ ಮಾಡಿ, ಆಟ ಆಡಿಕೊಂಡು ನಂತರ ಹೊರಗೆ ಹೋಗುವುದು ಅಭ್ಯಾಸ. ರೋಡಿನಲ್ಲಿ ಕೂರಿಸಿದ ಗಣಪತಿಗಳನ್ನೆಲ್ಲ ನೋಡುತ್ತಾ, ಯಾರು ಎಷ್ಟು ನೋಡಿದರು ಎನ್ನವುದನ್ನು ಲೆಕ್ಕ ಹಾಕುತ್ತಾ, ರಾತ್ರಿ ಇಡೀ ಜಾಗರಣೆ ಮಾಡಿ ನೆಂಟರ ಜತೆಗೆ ಸಮಯ ಕಳೆಯುವುದೇ ಒಂದು ಖುಷಿ.
ಅಕ್ಷಿತಾ ಸತ್ಯನಾರಾಯಣ, ನಟಿ
ಚಿಕ್ಕವರಿದ್ದಾಗ ಪ್ರತಿ ರೋಡ್‌ಗೆ ಹೋಗಿ ಅಲ್ಲಿ ಕೂರಿಸಿದ್ದ ಗಣೇಶ ನೋಡಿ ಪ್ರಸಾದ ಪಡೆದು ಬರುವುದೆಲ್ಲ ದೊಡ್ಡ ಸಡಗರವಾಗಿತ್ತು. ಆದರೆ, ಈಗ ಕೆಲಸದ ಒತ್ತಡದಿಂದ ಅವು ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯಲ್ಲಿ ಗಣಪತಿಯನ್ನು ಕೂರಿಸಿ ವಿಶೇಷವಾಗಿ ಆಚರಿಸುವ ಕ್ರಮ ಇಲ್ಲ. ಆದರೆ, ನನ್ನ ಕೆಲವು ನೆಂಟರುಗಳ ಮನೆಯಲ್ಲಿ ಕೂರಿಸುತ್ತಾರೆ. ಅಲ್ಲಿ ಮಾಡಿದ್ದ ಸಿಹಿ ತಿನಿಸುಗಳನ್ನು ತಿಂದು ಸವಿಯುತ್ತಿದ್ದೆ.ಈ ಹಿಂದೆ ನಮ್ಮ ಮೈಸೂರಿನಲ್ಲಿರುವ ಅಜ್ಜಿ ಮನೆಯಲ್ಲಿ ಕಸಿನ್ಸ್ ಎಲ್ಲ ಸೇರುವುದು, ಆಟ ಆಡುವುದು, ಒಟ್ಟಾರೆ ರಜಾ ದಿನವನ್ನು ಸಂಪೂರ್ಣ ಮಜಾ ಮಾಡುತ್ತಿದ್ದೆವು. ದೇವಸ್ಥಾನಕ್ಕೆ ಹೋಗುವುದು, ಕಡುಬು, ಒಬ್ಬಟ್ಟು, ಮಾಡಿ ಊಟ ಮಾಡುವುದೇ ಸಡಗರ. ಅದರ ಜತೆಗೆ ಹೊಸ ಬಟ್ಟೆ ಖರೀದಿಸಿದಾಗ ಏನೋ ಖುಷಿ. ಈ ವರ್ಷ ಗಣೇಶ ಹಬ್ಬ ಶೂಟಿಂಗ್ ಸೆಟ್‌ನಲ್ಲೇ ಆಗಲಿದೆ.
ಹರ್ಷಿಕಾ ಪೂಣಚ್ಚ, ನಟಿ
ಕೊಡವ ಸಂಪ್ರದಾಯದಲ್ಲಿ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸುವ ಅಭ್ಯಾಸವಿಲ್ಲ. ಆದರೆ, ನಾನು ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ಇರುವುದರಿಂದ ಗಣಪತಿ ಹಬ್ಬದ ಆಚರಣೆಯ ಖುಷಿಯಿದೆ. ಕಳೆದ ವರ್ಷಗಳೆಲ್ಲ ಸ್ನೇಹಿತರ ಮನೆಗೆ ಹೋಗಿ ಸಿಹಿ ಖಾದ್ಯಗಳನ್ನು ಸೇವಿಸುವುದು, ಪೂಜೆಗಳಲ್ಲಿ ಭಾಗಿಯಾಗುವುದು ಅಥವಾ ಕೆಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುವುದು ರೂಢಿ ಆಗಿತ್ತು. ಈ ಬಾರಿ ಇನ್ನೂ ವಿಶೇಷ. ನಾನು ಮತ್ತು ಭುವನ್ ದಂಪತಿ ಆದ ಬಳಿಕ ಮೊದಲ ಹಬ್ಬವಿದು. ನೆಂಟರುಗಳ ಮನೆಗೆ ಹೊಗಬೇಕಿದೆ. ಜತೆಗೆ ನಮ್ಮ ತವರು ಮನೆಯ ಕಡೆ ಹಾಗೂ ಭುವನ್ ಮನೆ ಕಡೆಯ ಕೆಲವು ಮದುವೆ ಶಾಸಗಳು ಇನ್ನೂ ಬಾಕಿ ಇವೆ. ಅವುಗಳನ್ನು ಮುಗಿಸಿ ತಲಕಾವೇರಿಗೆ ಭೇಟಿ ನೀಡಬೇಕು.