9 ರೂ. ಕೇಳಿದ್ದಕ್ಕೆ ಕ್ಷಣಾರ್ಧದಲ್ಲೇ ಟೀ ಅಂಗಡಿ ಧ್ವಂಸ; ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ

Viral Video
Published on

ಗುರುಗ್ರಾಮ: ಮೆನು ಕಾರ್ಡಿನಲ್ಲಿ ಇರುವ ಬೆಲೆಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದೀಯ ಎಂದು ಆರೋಪಿಸಿ ಯುವಕರ ಗುಂಪೊಂದು ಟೀ ಅಂಗಡಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​ ಸೂಚಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಗ್ರಾಹಕರು ಇರುವ ಟೀ ಅಂಗಡಿಇ ಒಳಗೆ ಏಕಾಏಕಿ ನುಗ್ಗಿ ಕ್ಯಾಶಿಯರ್​ ಬಳಿ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಇದಾದ ಕೆಲವೇ ಕ್ಷಣಕ್ಕೆ ಅಂಗಡಿಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ ಗುಂಪು ಬಳಿಕ ಕ್ಯಾಶಿಯರ್​ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವುದನ್ನು ನೋಡಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೂವರು ಯುವಕರು ಚಹಾ ಸೇವಿಸಲೆಂದು ಪಾಲಂ ವಿಹಾರ್ ಪೋಲೀಸ್ ಠಾಣೆ ವ್ಯಾಪ್ತಿ ಅಲ್ಲಿರುವ ಪ್ರಖ್ಯಾತ ಟೀ ಅಂಗಡಿ ಒಂದಕ್ಕೆ ಹೋಗಿದ್ದಾರೆ. ಚಹಾ ಸೇವಿಸಿದ ಬಳಿಕ ಬಿಲ್​ ಪಾವತಿಸಲು ಮುಂದಾದಾಗ ಕ್ಯಾಶಿಯರ್​ 45 ರೂಪಾಯಿ ಪಾವತಿಸುವಂತೆ ಹೇಳುತ್ತಾರೆ.

ಇದರಿಂದ ಕುಪಿತಗೊಂಡ ಯುವಕರು ತೆಗೆದುಕೊಂಡಿರುವ ಮೂರು ಚಹಾದ ಬೆಲೆ 36 ರೂಪಾಯಿ ಆಗಿದ್ದು, ಯಾಕೆ 45 ರೂ. ಕೊಡಬೇಕೆಂದು ಪ್ರಶ್ನಿಸಿದ್ದಾರೆ. ಇಲ್ಲ ಎಂದು ಕ್ಯಾಶಿಯರ್​ ಮೆನು ಕಾರ್ಡ್​ ತೋರಿಸಿದಾಗ ಸಿಟ್ಟಿಗೆದ್ದು ಯುವಕರು ತಮ್ಮ ಸ್ನೇಹಿತರು ಕರೆಸಿಕೊಂಡು ದಾಂಧಲೆ ನಡೆಸಿ ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಇತ್ತ ಈ ಘಟನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಕೇವಲ 9 ರೂಪಾಯಿಗಾಗಿ ಈ ರೀತಿಯ ಕೆಲಸ ಮಾಡುವುದು ಸರಿಯಲ್ಲ ಎಂದು ಹಲವರು ಕಿಡಿಕಾರಿದ್ದಾರೆ. ಇತ್ತ ವೈರಲ್​ ಆಗಿರುವ ವಿಡಿಯೋ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net