

ನವದೆಹಲಿ: ಹಲವರು ಮಂದಿಗೆ ಅದರಲ್ಲಿಯೂ ಯುವಜನರಿಗೆ ಇದೀಗ ಬಗೆಬಗೆಯ ಪೋಸ್ ಕೊಟ್ಟು ಫೋಟೋ ಇಲ್ಲವೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದರೆಂದರೆ ಬಲು ಖುಷಿ. ಅದರಲ್ಲಿಯೂ ಇದೀಗ ಟಿಕ್ಟಾಕ್ನಲ್ಲಿ ವಿಡಿಯೋ ಮಾಡುವ ಹುಚ್ಚು ಹಲವರ ತಲೆಗೆ ಹತ್ತಿಬಿಟ್ಟಿದೆ.
ಕೆಲವರು ಈ ರೀತಿ ವಿಡಿಯೋ ಮಾಡಿ ಹಾಕಿದರೆ ಅವರಿಗೆ ಹಲವಾರು ಲೈಕ್ಸ್, ಕಮೆಂಟ್ ಬರುತ್ತಲೇ ಇರುತ್ತವೆ. ಇದು ಇನ್ನು ಕೆಲವರಿಗೆ ಸಹಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಡಿಯೋ ಕ್ಲಿಕ್ ಆಗುವವನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಲೇ ಇರುತ್ತಾರೆ.
ಇಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮೇಲಿಂದ ಮೇಲೆ ಬಗೆಬಗೆಯ ಸ್ಟೈಲ್ ಮಾಡಿ ವಿಡಿಯೋ ಮಾಡಿಕೊಂಡು ಅದನ್ನು ಟಿಕ್ಟಾಕ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಬಾಲಕನನ್ನು ಪಿಸ್ತೂಲು ಹಿಡಿದಿರುವ ಇಬ್ಬರು ಯುವಕರು ಅಟ್ಯಾಕ್ ಮಾಡಿ ಬೆದರಿಸಿದ್ದಾರೆ.
ಬಾಲಕ ನಿಯಮಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ. ಇದನ್ನು ಸಹಿಸದ ಕಾರಣಕ್ಕೋ ಅಥವಾ ಇನ್ನಾವ ಕಾರಣಕ್ಕೋ ಗೊತ್ತಿಲ್ಲ. ಆದರೆ ಇಬ್ಬರು ಯುವಕರು ಪಿಸ್ತೂಲ್ ಹಿಡಿದು ಬಂದು, ಬಾಲಕನ ತಲೆಗೆ ಗುರಿಯಿಟ್ಟು, ಇನ್ನು ಮುಂದೆ ವಿಡಿಯೋ ಅಪ್ಲೋಡ್ ಮಾಡದಂತೆ ಧಮಕಿ ಹಾಕಿದ್ದಾರೆ. ತಮ್ಮ ಮಾತನ್ನು ಮೀರಿ ವಿಡಿಯೋ ಮಾಡಿದರೆ ಶೂಟ್ಔಟ್ ಮಾಡುವುದಾಗಿ ಎಚ್ಚರಿಸಿದ್ದಾರೆ.
ವಿಡಿಯೋ ಮಾಡಲು ಕ್ಯಾಮರಾ ಸಹಿತ ಬಂದಿದ್ದ ಬಾಲಕ ಈ ಯುವಕರ ನಡೆ ನೋಡಿ ಬೆವೆತು ಅಲ್ಲಿಂದ ಕಾಲ್ಕಿತ್ತಿದ್ದಾನೆ. ವಿಡಿಯೋ ಮಾಡಲು ಒಂದು ಸ್ಥಳದಲ್ಲಿ ಕ್ಯಾಮರಾ ಫಿಕ್ಸ್ ಮಾಡಿಟ್ಟುಕೊಂಡಿದ್ದ ಬಾಲಕ. ಈ ಹಿನ್ನೆಲೆಯಲ್ಲಿ ಯುವಕರು ಅಲ್ಲಿಗೆ ಬಂದು ಧಮಕಿ ಕೊಟ್ಟಿದ್ದು, ಅವರಿಗೆ ಹೆದರಿ ಬಾಲಕ ಓಡಿ ಹೋದದ್ದು ಎಲ್ಲವೂ ಆ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಭಾರಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)