

ಹಾಸನ: ಪ್ರೀತಿಸಿದ್ದ ಯುವತಿ ಮೋಸ ಮಾಡಿದ್ದಾಳೆ ಎಂದು ಮನನೊಂದ ಯುವಕ ಚೆನ್ನೈನ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್(26) ಮೃತ ಯುವಕ.
ಕಳೆದ ನಾಲ್ಕು ವರ್ಷಗಳಿಂದ ಹೊಳೆನರಸೀಪುರ ತಾಲ್ಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದ. ಜನವರಿ 27ರಂದು ಯುವತಿ ತಾನು ಚೆನ್ನೈನಲ್ಲಿದ್ದು, ಅಲ್ಲಿಗೇ ಬರುವಂತೆ ಕರೆದಿದ್ದಾಳೆ. ಆಕೆಯ ಮಾತು ನಂಬಿ ಯುವಕ ಕಾರ್ತಿಕ್ ಚೆನ್ನೈಗೆ ಹೋಗಿದ್ದಾನೆ. ಆದರೆ ಯುವಕ ಚೆನ್ನೈ ತಲುಪುತ್ತಿದ್ದಂತೆ ನಾನು ಹಾಸನದಲ್ಲೇ ಇದ್ದೇನೆ ಎಂದು ಯುವತಿ ಹೇಳಿದ್ದಾಳೆ.
ಯುವತಿ ತನಗೆ ಮೋಸ ಮಾಡಿದ್ದಾಳೆ ಎಂದು ಮನನೊಂದ ಯುವಕ ಲಾಡ್ಜ್ನಲ್ಲಿ ನೇಣಿಗೆ ಶರಣಾಗಿದ್ದಾನೆ. ಹಾಸನದ ಪ್ರತಿಷ್ಠಿತ ಹೋಟೆಲ್ನಲ್ಲಿ ರಿಸೆಪ್ಷನಿಷ್ಟ್ ಆಗಿ ಯುವಕ ಕಾರ್ತಿಕ್ ಕೆಲಸ ಮಾಡುತ್ತಿದ್ದ. ಸದ್ಯ ಯುವತಿ ಪ್ರೀತಿಸಿ ಮೋಸ ಮಾಡಿದ್ದಾಳೆ. ನಮ್ಮ ಮಗನ ಸಾವಿಗೆ ಯುವತಿಯೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಪೋಷಕರ ಆಗ್ರಹಿಸಿದ್ದಾರೆ.
ಚೆನ್ನೈನ ಆರಂಬಕ್ಕಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಯುವಕನ ಮೃತದೇಹ ಚೆನ್ನೈನಿಂದ ಹಾಸನಕ್ಕೆ ತರಲಾಗಿದೆ.