ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆ ಸಾವಿಗೆ ಶರಣು

Bantwal Suicide
Published on

ದಕ್ಷಿಣ ಕನ್ನಡ: ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಮೃತರನ್ನು ಸಜೀಪ್ ಮುಡಾ ಗ್ರಾಮದ ಸುಭಾಷ್ ನಗರದ ನಿವಾಸಿ ನೌಸೀನ್ (22) ಎಂದು ಗುರುತಿಸಲಾಗಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಉಳ್ಳಾಲ ಮೂಲದ ಅಝ್ಮಾನ್ ಎಂಬಾತನೊಂದಿಗೆ ನೌಸೀನ್ ಎಂಬುವವರ ಜತೆ ಇವರ ವಿವಾಹವಾಗಿತ್ತು.

ನೌಸೀನ್ ಹಾಗೂ ಅಝ್ಮಾನ್ ಪ್ರೀತಿಸಿ ಮದುವೆಯಾಗಿದ್ದರು. ಇದು ಪ್ರೇಮ ವಿವಾಹವಾಗಿದ್ದರೂ ಮದುವೆಯ ಉಡುಗೊರೆಯಾಗಿ ಅಥವಾ ವರದಕ್ಷಿಣೆಯಾಗಿ 180 ಗ್ರಾಂ ಚಿನ್ನವನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ.

ವಧುವಿನ ಮನೆಯವರು ನೀಡಿದ ವರದಕ್ಷಿಣೆ ಸಾಕಾಗುವುದಿಲ್ಲ ಎಂದು ಆಕೆಯ ಅತ್ತೆ ಜುಬೈದಾ, ನೌಸೀನ್ ಅವರ ಅತ್ತಿಗೆ ಅಜ್ಮಿಯಾ ಮತ್ತು ಅವರ ಪತಿಯೊಂದಿಗೆ ಅವಳನ್ನು ದೂಷಣೆ ಮಾಡುತ್ತಾ ಮಾನಸಿಕ ಕಿರುಕುಳ ನೀಡಿದ್ದಾರೆ. ತಮ್ಮ ಮಗನನ್ನು ಪ್ರೀತಿಸಿ, ಮದುವೆಯಾಗಿದ್ದಕ್ಕೆ ಪ್ರತಿನಿತ್ಯ ಟೀಕಿಸುತ್ತಿದ್ದರು ಎಂದು ತಿಳಿದು ಬಂದಿದೆ.

ನಿರಂತರ ಕಿರುಕುಳದಿಂದಾಗಿ ನೌಸೀನ್ ಉಳ್ಳಾಲದಲ್ಲಿರುವ ತನ್ನ ಗಂಡನ ಮನೆಯನ್ನು ತೊರೆದು ಸಮೀಪದಲ್ಲಿರುವ ತನ್ನ ತಾಯಿಯ ಮನೆಗೆ ಮರಳಿದ್ದಳು. ಮಾನಸಿಕವಾಗಿ ನೊಂದ ನೌಸೀನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಸೀರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಮಾಜಿಕ ಜಾಲತಾಣ ಮೂಲಕ ಪರಿಚಯ

ಸಜೀಪ ಮೂಡದ ನಿವಾಸಿ ಕೆ ಎಂ ಬಾವಾ ಅವರ ಪುತ್ರಿ ನೌಸೀನ್ ಅವರು ಉಳ್ಳಾಲ ಮೂಲದ ಅಜ್ಮಾನ್ ಅವರನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ಮೊದಲು ಭೇಟಿಯಾದರು. ಆ ಸಂಪರ್ಕವು ಕಾಲಾಂತರದಲ್ಲಿ ಪ್ರೀತಿಯಲ್ಲಿ ಅರಳಿದೆ. ಮತ್ತು ಅವರು ಮದುವೆಯಾಗಲು ತಮ್ಮ ಕುಟುಂಬದ ಒಪ್ಪಿಗೆಯನ್ನು ಪಡೆದಿದ್ದರು.

ನೌಸೀನ್ ತಂದೆ ತಮ್ಮ ಮಗಳ ಮದುವೆಗೆ 180 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡಿದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ನೌಸೀನ್‌ಳ ಚಿನ್ನಾಭರಣ ವಸ್ತುಗಳನ್ನು ಅಜ್ಮಾನ್ ಮಾರಾಟ ಮಾಡಿದ್ದಾನೆ. ಸಾಲದು ಅಂತಾ ಹೆಚ್ಚಿನ ಚಿನ್ನ ನೀಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಆಕೆಯ ದುರಂತ ಸಾವಿಗೆ ಪತಿ, ಅತ್ತೆ ಮತ್ತು ಅತ್ತಿಗೆ ಕಾರಣ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ನೌಸೀನ್ ಸಂಬಂಧಿ ಸಿದ್ದಿಕ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net