ನಿಮಗೂ ಈ ರೀತಿ ಕರೆ ಬರಬಹುದು ಎಚ್ಚರ! ಪೊಲೀಸರ ವೇಷದಲ್ಲಿ ವಿಡಿಯೋ ಕಾಲ್ ಮಾಡಿ ಹಣ ಪೀಕುವ ದುಷ್ಟರು

Digital arrest

| ಪರಶುರಾಮ ಭಾಸಗಿ ವಿಜಯಪುರ

ಪೊಲೀಸರ ವೇಷ ಧರಿಸಿ ವಿಡಿಯೋ ಕಾಲ್ ಮಾಡಿ ಲೈವ್‌ನಲ್ಲಿಯೇ ವ್ಯಕ್ತಿಯನ್ನು ಹಿಡಿದಿಟ್ಟು (ಡಿಜಿಟಲ್ ಅರೆಸ್ಟ್) ವಿಚಾರಣೆ ಹೆಸರಲ್ಲಿ ಆತನ ಎಲ್ಲ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ಎಗರಿಸುವ ದಂಧೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ!

ಹೌದು, ಇಂಥದ್ದೊಂದು ಪ್ರಕರಣಕ್ಕೆ ವಿಜಯಪುರದ ರಹೀಂ ನಗರದ ನಿವಾಸಿ ಸಂತೋಷ ಸುಭಾಸ ಚೌಧರಿ ಪಾಟೀಲ ಎಂಬುವರು ತುತ್ತಾಗಿದ್ದು, ಅದೃಷ್ಟವಶಾತ್ ಸಂತೋಷ ಯಾವುದೇ ರೀತಿಯಲ್ಲಿ ಹಣ ಕಳೆದುಕೊಂಡಿಲ್ಲ. ಆರಂಭದಲ್ಲಿ ವಂಚಕರು ಬೀಸಿದ ಬಲೆಗೆ ಯಾಮಾರಿ ಸಂಪೂರ್ಣ ಸಹಕರಿಸಿದ್ದ ಸಂತೋಷ್​, ಕೂಡಲೇ ಎಚ್ಚೆತ್ತುಕೊಂಡು ಅವರಿಂದ ಸಂಪರ್ಕ ಕಡಿದುಕೊಂಡಿದ್ದಾರೆ. ಮಾತ್ರವಲ್ಲ, ಅವರ ವಿಚಾರಣೆಯ ಇಂಚಿಂಚು ಮಾಹಿತಿ ಕೂಡ ರೆಕಾರ್ಡ್ ಮಾಡಿಕೊಂಡು ಸೈಬರ್ ಪೊಲೀಸರಿಗೆ ನೀಡಿದ್ದಾರೆ.

ಏನಿದು ಪ್ರಕರಣ?
ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಸಂತೋಷ್ ಸೆ.15ರಂದು ಮಧ್ಯಾಹ್ನ ಮನೆಯಲ್ಲಿರಬೇಕಾದರೆ ಐವಿಆರ್‌ಎಸ್ ರೀತಿಯಲ್ಲಿ ಟೆಲಿಕಾಂ ಕಂಪನಿಯಿಂದ ಮಾತನಾಡುತ್ತಿರುವಂತೆ ಹಿಂದಿಯಲ್ಲಿ ಮಾತನಾಡುತ್ತಾ ಎರಡು ಗಂಟೆಯಲ್ಲಿ ನೀವು ಬಳಸುವ ಎಲ್ಲ ನಂಬರ್‌ಗಳನ್ನು ಬ್ಲಾಕ್ ಮಾಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ನಂ.9 ನ್ನು ಪ್ರೆಸ್ ಮಾಡಿ ಎಂದಿದ್ದಾರೆ. ಆ ಪ್ರಕಾರ ಸಂತೋಷ್​ ನಂ.9ನ್ನು ಪ್ರೆಸ್ ಮಾಡಿದಾಗ ಆ ಕಡೆಯಿಂದ ನಾನು ರಾಹುಲ್ ಮಾತನಾಡುತ್ತಿರುವುದು, ನಿಮಗೆ ಕಾಲ್ ಕನೆಕ್ಟ್ ಆಗುವುದಕ್ಕೂ ಮುಂಚೆ ಕೇಳಿಸಿಕೊಂಡ ರೆಕಾರ್ಡಿಂಗ್ ಕಾಲ್​ನಲ್ಲಿರುವ ಮಾಹಿತಿ ಸಿಕ್ಕಿದೆಯಾ ಎಂದಾಗ ಸಂತೋಷ್​ ಹೌದು ಎಂದಿದ್ದಾರೆ. ಬಳಿಕ ಸಂತೋಷ್​ ಅವರ ಹೆಸರು ತಿಳಿದುಕೊಂಡು ಮೊಬೈಲ್ ನಂಬರ್ ಆಧಾರ್‌ಗೆ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಕೊಂಡಿದ್ದಾರೆ.

ನಂತರ ಕರೆ ಮಾಡಿದ ವ್ಯಕ್ತಿ ನಿಮ್ಮ ಆಧಾರ್‌ಗೆ ಹೊಸ ಮೊಬೈಲ್ ನಂಬರ್ ಆಕ್ಟೀವ್ ಆಗಿದೆ. ಆ ಹೊಸ ನಂಬರ್‌ನಿಂದ ತುಂಬಾ ವಯಲೇಶನ್ ಆಗಿದ್ದು, ಮುಂಬೈ ಜನತೆಗೆ ಅಕ್ರಮವಾಗಿ ಕಿರುಕುಳ ನೀಡುವ ಸಂದೇಶಗಳು ತಲುಪುತ್ತಿವೆ. ಈ ಬಗ್ಗೆ ಮುಂಬೈ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ಟ್ರಾಯ್ (ಟೆಲಿಕಾಂ ರೆಗ್ಯುಲೇಟ್ರಿ ಅಥಾರಿಟಿ ಆಫ್ ಇಂಡಿಯಾ)ಗೆ ನೋಟಿಫಿಕೇಶನ್ ಹೋಗಿದೆ. ಹೀಗಾಗಿ ನಿಮ್ಮ ಮೊಬೈಲ್ ನಂಬರ್ ನೀವೇ ಬಳಸುತ್ತಿದ್ದೀರಾ ಅಥವಾ ಬೇರೆಯವರಿಗೆ ಯಾರಿಗಾದರೂ ಕೊಟ್ಟಿದ್ದೀರಾ? ಎಂದು ತಮ್ಮದೇ ಒಂದು ಮೊಬೈಲ್ ಸಂಖ್ಯೆ ಹೇಳಿದ್ದಾರೆ. ಆದರೆ, ಸಂತೋಷ್​ ಅವರು ಆ ಮೊಬೈಲ್ ನಂಬರ್ ನಾನು ಬಳಸಿಯೂ ಇಲ್ಲ ಮತ್ತು ಯಾರಿಗೂ ಕೊಟ್ಟಿಲ್ಲ ಎಂದಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಅವರು ನಮ್ಮ ಮಾಹಿತಿ ಪ್ರಕಾರ ನಿಮ್ಮ ಮೊಬೈಲ್ ನಂಬರ್ ಮುಂಬೈಯ ಅಂಧೇರಿ ಈಸ್ಟ್‌ನ ಜೆಬಿ ನಗರದ ಜಯನಗರ ಕಾಲನಿಯ ಅಂಗಡಿಯೊಂದರಿಂದ ಖರೀದಿಯಾಗಿದೆ. ಇಲ್ಲವೆಂದು ಹೇಗೆ ಹೇಳುತ್ತೀರಿ ಎಂದು ಗದರಿದ್ದಾರೆ. ಅದಕ್ಕೆ ಸಂತೋಷ್​ ನಾನು ಯಾವುದೇ ನಂಬರ್ ಪಡೆದಿಲ್ಲ, ಯಾವುದೇ ಸಂದೇಶ ಕಳುಹಿಸಿಲ್ಲ ಎನ್ನುತ್ತಾರೆ. ನಿಮಗೆ ಈ ದೇಶದ ಕಾನೂನು ಮತ್ತು ಆಧಾರ್ ಕಾರ್ಡ್ ಬಗ್ಗೆ ಏನು ಕಾನೂನು ಇದೆ ಎಂಬುದು ಗೊತ್ತಿದೆಯಾ? ಎಂದು ಸೈಬರ್​ ಕ್ರಿಮಿನಲ್​ಗಳು ಕೇಳುತ್ತಲೇ ಆಧಾರ್ ಕಾರ್ಡ್ ನಂಬರ್ ಪಡೆದು ಎರಡು ಗಂಟೆಯಲ್ಲಿ ಮುಂಬೈ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಗಾಬರಿಗೊಂಡ ಸಂತೋಷ್​ ಎರಡು ಗಂಟೆಯಲ್ಲಿ ಮುಂಬೈ ತಲುಪುವುದು ಸಾಧ್ಯವಿಲ್ಲ ಎಂದಿದ್ದಾರೆ.

ನಕಲಿ ಎಫ್‌ಐಆರ್ ದಾಖಲು
ಸಂತೋಷ್​ ಎರಡು ಗಂಟೆಯಲ್ಲಿ ಮುಂಬೈ ತಲುಪುವುದು ಅಸಾಧ್ಯವೆಂದು ಮೊದಲೇ ಅರಿತಿದ್ದ ಖಾಕಿ ವೇಷದ ಖದೀಮರು ಆತನ ಮೇಲೆ ದಾಖಲಿಸಿದ ನಕಲಿ ಎಫ್‌ಐಆರ್ ಪ್ರತಿ ತೋರಿಸಿದ್ದಾರೆ. ಅಂಧೇರಿ ಸೈಬರ್ ಪೊಲೀಸ್ ಠಾಣೆಯದ್ದು ಎನ್ನಲಾದ ಮೊಬೈಲ್ ನಂಬರ್ ನೀಡಿ ಅದಕ್ಕೆ ನಿಮ್ಮ ಹೆಸರು ಮತ್ತು ಎಫ್‌ಐಆರ್ ಪ್ರತಿ ನೀಡಿದರೆ ಆ ಕಡೆಯಿಂದ ತಮಗೆ ವಿಡಿಯೋ ಕಾಲ್ ಬರಲಿದ್ದು, ಅವರಿಗೆ ಮಾಹಿತಿ ನೀಡಿ ಎಂದು ಕರೆ ಕಡಿತಗೊಳಿಸಿದ್ದಾರೆ. ಆ ಪ್ರಕಾರ ಸಂತೋಷ್​ ತಮ್ಮ ಹೆಸರು ಮತ್ತು ಎಫ್‌ಐಆರ್ ನಂಬರ್ ವಾಟ್ಸಪ್ ಮಾಡಿದ್ದಾರೆ.

ಪೊಲೀಸ್‌ರ ವೇಷ-ಕಚೇರಿ ಸೆಟಪ್
ಸ್ಪಲ್ಪ ಸಮಯದ ಬಳಿಕ ಸಂತೋಷ್​ಗೆ ವಿಡಿಯೋ ಕಾಲ್ ಬರುತ್ತದೆ. ಆ ಕಡೆಯಿಂದ ಪಿಎಸ್‌ಐ ದರ್ಜೆಯ ಯುನಿಫಾರ್ಮ್ ಧರಿಸಿದ ವ್ಯಕ್ತಿಯೋರ್ವನಿದ್ದು, ಹಿಂದುಗಡೆ ಎಲ್ಲವೂ ಪೊಲೀಸ್ ಠಾಣೆ ಮಾದರಿಯ ಚಿತ್ರಣವಿರುತ್ತದೆ. ಕರೆ ಮಾಡಿದಾತ ನಿಮ್ಮ ಹೆಸರಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ನಿಮ್ಮ ವಿಚಾರಣೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕಿದೆ ಎಂದು ಲೈವ್‌ನಲ್ಲಿಯೇ ಪ್ರದೀಪ್ ಸಾವಂತ್​ ಎಂಬ ಹೆಸರಿನವನನ್ನು ಕರೆದು, ಸಂತೋಷ್​ ಅವರ ಎಲ್ಲ ಡಿಟೇಲ್ಸ್ ಪಡೆದುಕೊಳ್ಳಿ ಎನ್ನುತ್ತಾನೆ.

ಆ ಪ್ರದೀಪ್ ಸಾವಂತ್​ ಒನ್‌ಸೈಡ್ ವಿಡಿಯೋ ಕಾಲ್ ಮಾಡಿ ಸಂತೋಷನಿಗೆ ಆಧಾರ್ ಕಾರ್ಡ್ ತೋರಿಸಿ ಎನ್ನಲಾಗಿ ಸಂತೋಷ ನಿರಾಕರಿಸುತ್ತಾನೆ. ಆಗ ಅವಾಚ್ಯ ಶಬ್ದಗಳಿಂದ ಬೈಯ್ದು ನಿನ್ನ ಮೇಲೆ ಎಫ್‌ಐಆರ್ ಆಗಿದೆ. ಇದರಲ್ಲಿ ನಿನಗೆ 3-5 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂಪಾಯಿಗಳ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಸಂತೋಷ ಮೊಬೈಲ್ ಕರೆ ಕಡಿತಗೊಳಿಸಿದ್ದಾರೆ. ಇದೀಗ ಸಂತೋಷನ ಪ್ರಕರಣ ದಾಖಲಿಸಿಕೊಂಡ ವಿಜಯಪುರ ಸೈಬರ್ ಪೊಲೀಸರು ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ತಂಡ ಕಟ್ಟಿಕೊಂಡು ಎಸ್‌ಪಿ ಋಷಿಕೇಶ ಸೋನಾವಣೆ ಮತ್ತು ಎಎಸ್‌ಪಿ, ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ವಂಚಕರ ಬೇಟೆಗೆ ಸಜ್ಜಾಗಿದ್ದಾರೆ.

ಸಾರ್ವಜನಿಕರು ಇಂಥ ಯಾವುದೇ ಕರೆಗಳು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ತಿಳಿಸಬೇಕು. ಕರೆ ಮಾಡಿದವರು ನಿಜವಾದ ಪೊಲೀಸರಾ ಅಥವಾ ಬೇರೆ ಯಾರಾದರೂ ಇದ್ದಾರಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಈಗ ಗೂಗಲ್‌ನಲ್ಲೂ ಆಯಾ ಠಾಣೆಗಳ ನಂಬರ್ ಮತ್ತು ಠಾಣಾಧಿಕಾರಿಗಳ ಹೆಸರುಗಳಿರುತ್ತವೆ. ಆ ಬಗ್ಗೆ ಪರಿಶೀಲಿಸಬೇಕು ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸಲಹೆ ನೀಡಿದರು.

ಆ ಗಾಯಕಿಯೇ ಜಯಂ ರವಿ ಡಿವೋರ್ಸ್​ಗೆ ಕಾರಣ? ಗೋವಾ ರಹಸ್ಯ ಬಯಲು, ಗಂಡನ ಮೇಲೆ ಆರತಿ ಆಕ್ರೋಶ

ಯಾರು ಏನೇ ಅಂದುಕೊಳ್ಳಲಿ ಆ ವಿಚಾರದಲ್ಲಿ ನಾನು ನಾಚಿಕೆಪಡುವುದಿಲ್ಲ! ರೋಹಿತ್​ ಅಚ್ಚರಿ ಹೇಳಿಕೆ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…