

ಟೋಕಿಯೊ: ಆರೋಗ್ಯ ಸಮಸ್ಯೆ ಕಾರಣಕ್ಕೆ ಕಳೆದ ತಿಂಗಳು ರಾಜೀನಾಮೆ ನೀಡಿದ್ದ ಶಿಂಜೋ ಅಬೆ ಅವರಿಂದ ತೆರವಾದ ಪ್ರಧಾನಮಂತ್ರಿ ಸ್ಥಾನಕ್ಕೆ ಸ್ಟ್ರಾಬೆರಿ ಕೃಷಿಕನ ಮಗ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ(ಎಲ್ಡಿಪಿ)ಯ ನೂತನ ನಾಯಕನ ಸ್ಥಾನಕ್ಕೆ ಆಂತರಿಕ ಚುನಾವಣೆ ನಡೆದಿದ್ದು, ಅದರಲ್ಲಿ ಯೋಶಿಹಿದೆ ಸುಗಾ ವಿಜೇತರಾಗುವ ನಿರೀಕ್ಷೆ ಇದೆ.
ಯೋಶಿಹಿದೆ ಸುಗಾ ಅವರು ಪ್ರಸ್ತುತ ಚೀಫ್ ಕ್ಯಾಬಿನೆಟ್ ಸೆಕ್ರೆಟರಿ ಆಗಿದ್ದು, ಅಬೆ ಅವರ ಬಲಗೈ ಬಂಟನಂತೆ ಕೆಲಸ ಮಾಡಿದ್ದಾರೆ. ಸಂಸತ್ತಿನಲ್ಲಿ ಎಲ್ಡಿಪಿ ಮೈತ್ರಿಕೂಟದಲ್ಲಿ ಬಹುಪಾಲು ಸದಸ್ಯರು ಯೋಶಿಹಿದೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸ್ಥಳೀಯ ಪ್ರತಿನಿಧಿಗಳ ಮತ ಎಣಿಕೆಯ ಆರಂಭಿಕ ಘಟ್ಟದಲ್ಲಿ ಯೋಶಿಹಿದೆ ಪಡೆದುಕೊಂಡ ಮತಗಳು ಸಮೀಪದ ಇಬ್ಬರು ಪ್ರತಿಸ್ಪರ್ಧಿಗಳಾದ ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ ಮತ್ತು ಮಾಜಿ ವಿದೇಶಾಂಗ ಸಚಿವ ಫುಮಿಯೋ ಕಿಶಿದಾ ಅವರು ಗಳಿಸಿದ ಮತಗಳಿಗಿಂತ ಬಹುಪಾಲು ಹೆಚ್ಚಿದೆ. ಪಕ್ಷದ ಘಟಾನುಘಟಿ ನಾಯಕರ ಬೆಂಬಲವೂ ಯೋಶಿಹಿದೆ ಅವರಿಗಿದ್ದು, ಅವರ ಬೆಂಬಲಿಗರೆಲ್ಲರ ಮತವೂ ಯೋಶಿಹಿದೆಗೆ ಸಿಗಲಿದೆ. ಹೀಗಾಗಿ ಅವರ ಗೆಲುವು ನಿಚ್ಚಳ ಎಂದು ವಿಶ್ಲೇಷಿಸಲಾಗುತ್ತಿದೆ.
ಅಷ್ಟೇನೂ ಪ್ರಸಿದ್ಧರಲ್ಲದ ಯೋಶಿಹಿದೆ ಅವರು, ಕೆಲಸ ಮಾಡಿಸಿಕೊಳ್ಳುವಲ್ಲಿ ನೀತಿ ಸಮನ್ವಯಕಾರರಾಗಿ ಟಫ್ ಇಮೇಜ್ ಹೊಂದಿದ್ದಾರೆ. ಪ್ರಧಾನಮಂತ್ರಿ ಕಚೇರಿ ಕೇಂದ್ರಿತ ಅಧಿಕಾರದ ಬಳಕೆಯನ್ನು ಸಮರ್ಥವಾಗಿ ನಿಭಾಯಿಸಿದ ಅನುಭವ ಅವರಿಗಿದೆ. ತಾವೊಬ್ಬ ಸುಧಾರಣಾವಾದಿ ರಾಜಕಾರಣಿಯಾಗಿದ್ದು, ಕಾಲಕಾಲಕ್ಕೆ ಆಗಬೇಕಾದ ನೀತಿ, ನಿಯಮ ಬದಲಾವಣೆಗಳನ್ನು ಮಾಡಲು ಬದ್ಧರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. (ಏಜೆನ್ಸೀಸ್)