

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ಧನಂಜಯ್ ಅಭಿನಯದ 'ಹೆಡ್ ಬುಷ್' ಚಿತ್ರದಲ್ಲಿ ಗಂಗ ಎಂಬ ಪಾತ್ರ ನಿರ್ವಹಿಸಿದ್ದ 'ಲೂಸ್ ಮಾದ' ಖ್ಯಾತಿಯ ಯೋಗಿ, ಈಗ ಅದೇ ನಿರ್ದೇಶಕರ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ 'ರೋಜಿ'. ಇದು ಅವರ ಅಭಿನಯದ 50ನೇ ಚಿತ್ರವಾಗಿದ್ದು, ಚಾಲನೆ ಸಿಕ್ಕಿದೆ.
ಭಾನುವಾರ, ರಾಜಾಜಿನಗರದ ನವರಂಗ್ ಚಿತ್ರಮಂದಿರದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಧನಂಜಯ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಚಿತ್ರಕ್ಕೆ ಚಾಲನೆ ನೀಡುವುದರ ಜತೆಗೆ ಹೆಸರು ಅನಾವರಣ ಮಾಡಿದ್ದಾರೆ.
'ರೋಜಿ' ಚಿತ್ರದಲ್ಲಿ ಯೋಗಿ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಯೋಗಿ, 'ಇದಕ್ಕೂ ಮುನ್ನ ಕೆಲವು ಚಿತ್ರಗಳಲ್ಲಿ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿದ್ದೆ. ಆ ನಂತರ ಬೇರೆ ತರಹದ ಪಾತ್ರಗಳನ್ನೂ ಮಾಡಿದೆ. ಇದು ನನ್ನ 50ನೇ ಚಿತ್ರ. ಈ ಚಿತ್ರದಲ್ಲಿ ಪುನಃ ಗ್ಯಾಂಗ್ಸ್ಟರ್ ಆಗಿ ನಟಿಸುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ' ಎನ್ನುತ್ತಾರೆ ಯೋಗಿ.
ಈ ಚಿತ್ರದ ಮುಹೂರ್ತವನ್ನು ಚಿತ್ರಮಂದಿರದಲ್ಲಿ ಮಾಡುತ್ತಿರುವ ಬಗ್ಗೆ ಮಾತನಾಡಿದ ಶೂನ್ಯ, 'ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ. ಈ ಚಿತ್ರದಲ್ಲಿ ಯೋಗಿ ಅವರ ಹೆಸರೇ ರೋಜಿ ಎಂದಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇವೆ' ಎನ್ನುತ್ತಾರೆ.
'ರೋಜಿ' ಚಿತ್ರವನ್ನು ಡಿ.ವೈ ರಾಜೇಶ್ ನಿರ್ಮಿಸುತ್ತಿದ್ದು, ಮೇನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.