

ಲಖನೌ: ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಇದುವರೆಗೆ 10,933 ಎನ್ಕೌಂಟರ್ಗಳಿಗೆ ಸಾಯಾಗಿದೆ. 183 ಕುಖ್ಯಾತ ದುಷ್ಕರ್ಮಿಗಳನ್ನು ಹತ್ಯೆ ಮಾಡಲಾಗಿದೆ. 5,046 ದುಷ್ಕರ್ಮಿಗಳು ಪೊಲೀಸರ ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ. ಬಳಿಕ ಅವರನ್ನು ಬಂಧಿಸಲಾಗಿದೆ.
ಎನ್ಕೌಂಟರ್ ಸಮಯದಲ್ಲಿ ಇದುವರೆಗೆ 23,348 ಅಪರಾಧಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾರ್ಯಾಚರಣೆ ವೇಳೆ 13 ಪೊಲೀಸರು ಪ್ರಾಣಕಳೆದುಕೊಂಡಿದ್ದಾರೆ. 1,443 ಪೊಲೀಸರು ಗಾಯಗೊಂಡಿದ್ದಾರೆ. ಮೇರಠ್ ವಲಯದಲ್ಲಿ ಹೆಚ್ಚಿನ ಎನ್ಕೌಂಟರ್ಗಳು ನಡೆದಿವೆ. ಜಿಲ್ಲೆಯಲ್ಲಿ ಆರು ವರ್ಷಗಳಲ್ಲಿ 3,205 ಎನ್ಕೌಂಟರ್ ಗಳು ನಡೆದಿವೆ. 64 ಅಪರಾಧಿಗಳು ಮೃತಪಟ್ಟು, 1708 ಮಂದಿ ಗಾಯಗೊಂಡಿದ್ದಾರೆ. 5967 ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಗ್ರಾದಲ್ಲಿ ಎರಡನೇ ಅತಿ ಹೆಚ್ಚು ಎನ್ಕೌಂಟರ್ಗಳಿವೆ.
ಉತ್ತರ ಪ್ರದೇಶದ ರನ್ಸಿಯಲ್ಲಿ ಗುರುವಾರ ಗುಂಡೇಟಿಗೆ ಬಲಿಯಾದ ಕೊಲೆ ಆರೋಪಿ ಅಸದ್ ಅಹ್ಮದ್ ಮತ್ತು ಗುಲಾಂ ರೂಪಿಸಿದ್ದ ಸಂಚನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಗೂಂಡಾ ಅತೀಕ್ ಅಹ್ಮದ್ನನ್ನು ಸಾಗಿಸುತ್ತಿದ್ದ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲು ಇವರು ಯೋಜಿಸಿದ್ದರು. ಆದರೆ ಭದ್ರತೆ ಬಿಗಿಯಾಗಿರುವುದರಿಂದ ಅತಿಕ್ನನ್ನು ಮುಕ್ತಗೊಳಿಸುವುದು ಕಷ್ಟ ಎಂದು ಅವರಿಗೆ ತಿಳಿದಿತ್ತು.
ಆದರೆ ಉತ್ತರ ಪ್ರದೇಶ ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ಉದ್ದೇಶದಿಂದ ಬೆಂಗಾವಲು ಪಡೆಗಳ ಮೇಲೆ ದಾಳಿ ನಡೆಸಲು ಅವರು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಗುಜರಾತ್ನ ಸಬರಮತಿ ಜೈಲಿನಿಂದ ಉತ್ತರ ಪ್ರದೇಶಕ್ಕೆ ಅತಿಕ್ನನ್ನು ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ದಾಳಿಗೆ ಅವರು ಸಂಚು ರೂಪಿಸಿದ್ದರು. ಭದ್ರತೆ ಹೆಚ್ಚಿದ್ದ ಕಾರಣ ಇದು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಸರ್ಕಾರ ಚುನಾವಣೆಯ ಮೇಲೆ ಕಣ್ಣಿಟ್ಟು ಎನ್ಕೌಂಟರ್ ನಡೆಸುತ್ತಿದೆ ಎಂದು ಸಮಾಜವಾದಿ ಪದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ. ಸರ್ಕಾರಿ ಸಂಸ್ಥೆಗಳು ಒಂದರ ನಂತರ ಒಂದರಂತೆ ಕೊನೆಗೊಳ್ಳುತ್ತಿವೆ. ಬಾಬಾ ಸಾಹೇಬ್ ನಮಗೆ ನೀಡಿದ ಸಂವಿಧಾನವನ್ನು ಬಿಜೆಪಿ ಸರ್ಕಾರ ನಾಶಮಾಡಲು ಯತ್ನಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಕಲಿ ಎನ್ಕೌಂಟರ್ಗಳನ್ನು ನಡೆಸುತ್ತಿದೆ. ಮನೆಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ. ಇದರಿಂದಾಗಿ ಇಬ್ಬರು ಪ್ರಾಣ ಕಳೆದುಕೊಂಡರು. ಬಲ್ಲಿಯಾದಲ್ಲಿ ವಿದ್ಯಾರ್ಥಿ ನಾಯಕನ ಹತ್ಯೆ ಆಗಿದೆ. ಈ ಬಗ್ಗೆಯೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪ ಮಾಡಿದರು.
ಇದನ್ನೂ ಓದಿ: ರಾಷ್ಟ್ರೀಯ, ರಾಜ್ಯ ಪಕ್ಷಗಳ ಸ್ಥಾನಮಾನ ಬದಲಾಗಿದ್ದೇಕೆ?